Monthly Archives: February 2018

ಎಂಬೆರುಮಾನಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಲೇಖನದಲ್ಲಿ (https://guruparamparaikannada.wordpress.com/2018/02/22/periya-nambi/) ನಾವು ಪೆರಿಯ ನಂಬಿ ಗಳ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ.

ತಾನಾನ ತಿರುಮೇನಿ (ಶ್ರೀರಂಗಂ) ತಾನುಗಂದ ತಿರುಮೇನಿ (ಶ್ರೀಪೆರುಂಬೂದೂರ್) ತಮರುಗಂದ ತಿರುಮೇನಿ (ತಿರುನಾರಾಯಣಪುರಂ)

ತಿರುನಕ್ಷತ್ರಂ: ಚಿತ್ತಿರೈ, ತಿರುವಾದಿರೈ

ಅವತಾರ ಸ್ಥಳಂ: ಶ್ರೀಪೆರುಂಬೂದೂರ್

ಆಚಾರ್ಯ: ಪೆರಿಯ ನಂಬಿ

ಶಿಷ್ಯರು: ಕೂರತ್ತಾಳ್ವಾನ್, ಮುದಲಿಯಾಂಡಾನ್, ಎಂಬಾರ್, ಅರುಳಾಳಪ್ಪೆರುಮಾಳ್ ಎಂಬೆರುಮಾನಾರ್, ಅನಂತಾಳ್ವಾನ್, 74 ಸಿಂಹಾಸನಾಧಿಪತಿಗಳು, ಸಾವಿರಾರು ಶಿಷ್ಯರು. ಅವರಲ್ಲಿ 12000 ಶ್ರೀವೈಷ್ಣವರು, 74 ಸಿಂಹಾಸನಾಧಿಪತಿಗಳು, 700 ಸಂನ್ಯಾಸಿಗಳು ಹಾಗು ವಿವಿಧ ಜಾತಿ/ಮತಗಳಿಗೆ ಸೇರಿದಂತಹ ಬಹಳಷ್ಟು ಶಿಷ್ಯರಿದ್ದರೆಂದು ಹೇಳಲಾಗುತ್ತದೆ

ಪರಮಪದ ಹೊಂದಿದ ಸ್ಥಳ: ತಿರುವರಂಗಂ

ಕೃತಿಗಳು: ಅವರು ರಚಿಸಿರುವ ಒಂಬತ್ತು ಗ್ರಂಥಗಳು ನವರತ್ನಗಳೆಂದು ಪರಿಗಣಿಸಲ್ಪಡುವುದು. ಅವು ಶ್ರೀಭಾಷ್ಯ, ಗೀತಾ ಭಾಷ್ಯ, ವೇದಾಂತ ಸಂಗ್ರಹ, ವೇದಾಂತ ದೀಪ, ವೇದಾಂತ ಸಾರ, ಶರಣಾಗತಿ ಗದ್ಯ, ಶ್ರೀರಂಗ ಗದ್ಯ, ಶ್ರೀವೈಕುಂಠಗದ್ಯ ಹಾಗು ನಿತ್ಯಗ್ರಂಥ

ಕೇಶವ ದೀಕ್ಷಿತರ್ ಹಾಗು ಕಾಂತಿಮತಿ ಅಮ್ಮಂಗಾರ್ ರಿಗೆ ಶ್ರೀಪೆರುಂಬೂದೂರಿನಲ್ಲಿ ಆದಿಶೇಷನ ಅವತಾರದಲ್ಲಿ ಹುಟ್ಟಿದ ಇಳೈಯಾಳ್ವಾರ್ ಅವರು ಇನ್ನೂ ಹಲವು ಹೆಸರುಗಳಿಂದ ಪರಿಚಿತರು. ಅವರಿಗೆ ಹೆಸರು ನೀಡಿದವರು ಹಾಗು ಅವರ ಅನೇಕ ಹೆಸರುಗಳು ಏನೆಂದು ನೋಡೋಣ.

 • ಇಳೈಯಾಳ್ವಾರ್ – ಅವರ ಹೆತ್ತವರ ಪರವಾಗಿ ಪೆರಿಯ ತಿರುಮಲೈ ನಂಬಿ ನೀಡಿದ್ದು
 • ಶ್ರೀ ರಾಮಾನುಜ – ಅವರ ಪಂಚಸಂಸ್ಕಾರದಲ್ಲಿ ಪೆರಿಯ ನಂಬಿ ನೀಡಿದ್ದು
 • ಯತಿರಾಜ ಮತ್ತು ರಾಮಾನುಜ ಮುನಿ – ಸಂನ್ಯಾಸಾಶ್ರಮ ಸ್ವೀಕಾರದಲ್ಲಿ ದೇವಪ್ಪೆರುಮಾಳ್ ನೀಡಿದ್ದು
 • ಉಡೈಯವರ್ – ನಮ್ ಪ್ಪೆರುಮಾಳ್ ನೀಡಿದ್ದು
 • ಲಕ್ಷ್ಮಣ ಮುನಿ – ತಿರುವರಂಗಪ್ಪೆರುಮಾಳ್ ಅರೈಯರ್ ನೀಡಿದ್ದು
 • ಎಂಬೆರುಮಾನಾರ್ – ತಿರುಕ್ಕೋಷ್ಟಿಯೂರ್ ನಂಬಿ ನೀಡಿದ್ದು -ತಿರುಕೋಷ್ಟಿಯೂರಿನಲ್ಲಿ ತಮ್ಮಲ್ಲಿ ಶರಣಾಗತಿ ಮಾಡಿದವರಿಗೆ ಚರಮಶ್ಲೋಕದ ಅರ್ಥವನ್ನು ಎಂಬೆರುಮಾನಾರ್ ಕೊಟ್ಟಾಗ.
 • ಶಠಗೋಪನ್ ಪೊನ್ನಡಿ – ತಿರುಮಲೈಯಾಂಡಾನ್ ನೀಡಿದ್ದು.
 • ಕೋಯಿಲ್ ಅಣ್ಣನ್ – ಆಂಡಾಳ್ ನೀಡಿದ್ದು – ತಿರುಮಾಲಿರುಂಶೋಲೈ ಅಳಗರ್ ರಿಗೆ 100  ಪಾತ್ರೆಗಳಲ್ಲಿ ಬೆಣ್ಣೆಯನ್ನೂ 100  ಪಾತ್ರೆಗಳಲ್ಲಿ ಅಕ್ಕಾರವಡಿಶಲ್ ಗಳನ್ನೂ ಎಂಬೆರುಮಾನಾರ್ ನೀಡಿದಾಗ.
 • ಶ್ರೀಭಾಷ್ಯಕಾರರ್ – ಕಾಶ್ಮೀರದಲ್ಲಿ ಸರಸ್ವತಿ ನೀಡಿದ್ದು.
 • ಭೂತಪುರೀಶರ್ – ಶ್ರೀಪೆರುಂಬೂದೂರಿನ ಆದಿ ಕೇಶವ ಪ್ಪೆರುಮಾಳ್ ನೀಡಿದ್ದು.
 • ದೇಶಿಕೇಂದ್ರರ್ – ತಿರುವೇಂಗಡಮುಡೈಯಾನ್ ನೀಡಿದ್ದು.

ಸಂಕ್ಷಿಪ್ತ ಜೀವನ ಚರಿತ್ರೆ

 • ತಿರುವಲ್ಲಿಕ್ಕೇಣಿ ಪಾರ್ಥಸಾರಥಿ ಎಂಬೆರುಮಾನ್ ಅವರ ಅನುಗ್ರಹ ಹಾಗು ಅಂಶಾವತಾರವಾಗಿ ಶ್ರೀಪೆರುಂಬೂದೂರಿನಲ್ಲಿ ಹುಟ್ಟಿದರು.

ಉಭಯ ನಾಚ್ಚಿಯಾರೊಡನೆ ಪಾರ್ಥಸಾರಥಿ ಹಾಗು ಉಡಯವರ್ – ತಿರುವಲ್ಲಿಕ್ಕೇಣಿ

 • ತಂಜಮ್ಮಾಳ್ (ರಕ್ಷಕಾಂಬಾಳ್) ಅವರೊಂದಿಗೆ ಮದುವೆಯಾದರು.
 • ಕಾಂಚೀಪುರಕ್ಕೆ ತೆರಳಿ ಯಾದವಪ್ರಕಾಶರಲ್ಲಿ ಸಾಮಾನ್ಯಶಾಸ್ತ್ರ ಹಾಗು ಪೂರ್ವಪಕ್ಷ ಕಲಿತರು.
 • ಶಾಸ್ತ್ರವಾಕ್ಯಗಳಿಗೆ ಯಾದವಪ್ರಕಾಶರು ಡೊಂಕಾದ ವ್ಯಾಖ್ಯಾನಗಳು ನೀಡಿದಾಗ – ಇಳೈಯಾಳ್ವಾರ್ ಅದನ್ನು ಸರಿಪಡಿಸಿದರು.
 • ವಾರಣಾಸಿಗೆ ತೀರ್ಥಯಾತ್ರೆಯ ಸಮಯದಲ್ಲಿ ಇಳೈಯಾಳ್ವಾರರನ್ನು ಕೊಲ್ಲಲು ಯಾದವಪ್ರಕಾಶರ ಕೆಲ  ಶಿಷ್ಯರು ಸಂಚನ್ನು ರೂಪಿಸುತ್ತಾರೆ. ಗೋವಿಂದ (ಮುಂದೆ ಎಂಬಾರ್) ಎನ್ನುವ  ಇಳೈಯಾಳ್ವಾರರ ಸೋದರಸಂಬಂಧಿ ಆ ಯೋಜನೆಯನ್ನು ಅಡ್ಡಿಪಡಿಸಿ ಇಳೈಯಾಳ್ವಾರರನ್ನು ಕಾಂಚೀಪುರದತ್ತ ಕಳುಹಿಸುತ್ತಾರೆ. ಕಾಡಿನಲ್ಲಿ ಕಳೆದು ಹೋಗಿದ್ದ ಭಾವನೆಯಲ್ಲಿದ್ದ ಇಳೈಯಾಳ್ವಾರರಿಗೆ ದೇವಪ್ಪೆರುಮಾಳ್ ಮತ್ತು ಪ್ಪೆರುಂದೇವಿ ತಾಯಾರ್ ಸಹಾಯ ಮಾಡಿ, ಇಳೈಯಾಳ್ವಾರ್ ಕಾಂಚೀಪುರಕ್ಕೆ ಹಿಂತಿರುಗಿ ಬರುತ್ತಾರೆ.
 • ಹಿಂತಿರುಗಿದ ನಂತರ ತಮ್ಮ ತಾಯಿಯ ಸಲಹೆಯಂತೆ ಅವರು  ತಿರುಕ್ಕಚ್ಚಿ ನಂಬಿಗಳ ಮಾರ್ಗದರ್ಶನದಲ್ಲಿ ದೇವಪ್ಪೆರುಮಾಳ್ ರ ಕೈಂಕರ್ಯದಲ್ಲಿ ತೊಡಗುತ್ತಾರೆ.
 • ಇಳೈಯಾಳ್ವಾರ್ ಆಳವಂದಾರರನ್ನು ಭೇಟಿಮಾಡಲು ಪೆರಿಯನಂಬಿಗಳೊಡನೆ ಶ್ರೀರಂಗಕ್ಕೆ ಪ್ರಯಾಣ ಮಾಡುತ್ತಾರೆ- ಆದರೆ ಆಳವಂದಾರರ ಚರಮ ತಿರುಮೇನಿಯನ್ನು ಮಾತ್ರ ನೋಡುತ್ತಾರೆ. ಆಳವಂದಾರರ 3 ಆಸೆಗಳನ್ನು ತಾವು ಈಡೇರಿಸುವುದಾಗಿ ಪ್ರತಿಜ್ಞೆ ಮಾಡುತ್ತಾರೆ.
 • ಇಳೈಯಾಳ್ವಾರ್ ತಿರುಕ್ಕಚ್ಚಿನಂಬಿಗಳನ್ನು ತಮ್ಮ ಗುರುಗಳನ್ನಾಗಿ ಪರಿಗಣಿಸಿ ತಮಗೆ ಪಂಚಸಂಸ್ಕಾರವನ್ನು ಮಾಡಲು ಕೇಳಿಕೊಳ್ಳುತ್ತಾರೆ, ಆದರೆ ಶಾಸ್ತ್ರ ಪ್ರಮಾಣಗಳನ್ನು  ಉಲ್ಲೇಖಿಸುತ್ತಾ ನಂಬಿಗಳು ಆ ಕಾರ್ಯವನ್ನು ಮಾಡಲು ನಿರಾಕರಿಸುತ್ತಾರೆ. ತಿಕ್ಕಚ್ಚಿನಂಬಿಗಳ ಶೇಷಪ್ರಸಾದವನ್ನು ಸ್ವೀಕರಿಸಲು ಇಳೈಯಾಳ್ವಾರ್ ಬಯಸುತ್ತಾರೆ ಆದರೆ ಅವರ ಬಯಕೆ ಈಡೇರುವುದಿಲ್ಲ.
 • ದೇವಪ್ಪೆರುಮಾಳ್ ತಿರುಕ್ಕಚ್ಚಿ ನಂಬಿಗಳ ಮೂಲಕ ಇಳೈಯಾಳ್ವಾರರಿಗೆ ಆರು ವಾರ್ತೆಗಳನ್ನು (6 ಪದಗಳು) ನೀಡುತ್ತಾರೆ.
 • ಇಳೈಯಾಳ್ವಾರ್ ಹಾಗು ಪೆರಿಯ ನಂಬಿಗಳ ಭೇಟಿ ಮಧುರಾಂತಕದಲ್ಲಿ ನಡೆಯುತ್ತದೆ. ಪೆರಿಯನಂಬಿಗಳು ಇಳೈಯಾಳ್ವಾರರಿಗೆ ಪಂಚಸಂಸ್ಕಾರವನ್ನು ಮಾಡುತ್ತಾರೆ ಹಾಗು ಅವರಿಗೆ ರಾಮಾನುಜನ್ ಎನ್ನುವ ದಾಸ್ಯನಾಮವನ್ನು ನೀಡುತ್ತಾರೆ.
 • ರಾಮಾನುಜರ ತಿರುಮಾಳಿಗೆಯಲ್ಲಿ ವಾಸ ಮಾಡುವ ಪೆರಿಯನಂಬಿ ಅವರಿಗೆ ಸಂಪ್ರದಾಯ ಅರ್ಥಗಳಲ್ಲವನ್ನೂ ಕಲಿಸುತ್ತಾರೆ.  ಅಂತಿಮವಾಗಿ ಪೆರಿಯನಂಬಿಗಳು ಶ್ರೀರಂಗಕ್ಕೆ ಹೊರಡುತ್ತಾರೆ.
 • ರಾಮಾನುಜರು ದೇವಪ್ಪೆರುಮಾಳ್ ರಿಂದ ಸಂನ್ಯಾಸಾಶ್ರಮವನ್ನು ಸ್ವೀಕರಿಸುತ್ತಾರೆ.
 • ಆಳ್ವಾನ್ ಮತ್ತು ಆಂಡಾನ್ ರಾಮಾನುಜರ ಶಿಷ್ಯರಾಗುತ್ತಾರೆ.
 • ರಾಮಾನುಜರ ಶಿಷ್ಯರಾಗುವ ಯಾದವಪ್ರಕಾಶರು ಗೋವಿಂದ ಜೀಯರ್ ಎಂದು ಕರೆಸಿಕೊಳ್ಳುತ್ತಾರೆ. ಅವರು ರಚಿಸಿದ “ಯತಿ  ಧರ್ಮ ಸಮುಚ್ಚಯಂ”- ಶ್ರೀವೈಷ್ಣವ ಯತಿಗಳಿಗೆ ಮಾರ್ಗದರ್ಶನವಾಗಿ ಉಪಯೋಗಿಸಲ್ಪಡುತ್ತದೆ.
 • ಪೆರಿಯಪ್ಪೆರುಮಾಳ್ ತಿರುವರಂಗ ಪ್ಪೆರುಮಾಳ್ ಅವರನ್ನು  ರಾಮಾನುಜರನ್ನು ಶ್ರೀರಂಗಕ್ಕೆ ಕರೆತರಲು ದೇವಪ್ಪೆರುಮಾಳ್ ಅವರ ಬಳಿಗೆ ಕಳುಹಿಸುತ್ತಾರೆ. ದೇವಪ್ಪೆರುಮಾಳ್ ಒಪ್ಪಿದ ನಂತರ ರಾಮಾನುಜರು ಶ್ರೀರಂಗವಾಸಿಯಾಗುತ್ತಾರೆ.
 • ರಾಮಾನುಜರು ಪೆರಿಯ ತಿರುಮಲೈ ನಂಬಿಗಳಿಂದ ಗೋವಿಂದ ಭಟ್ಟರ್ (ಎಂಬಾರ್) ಅವರನ್ನು ಪುನಃ ಶ್ರೀವೈಷ್ಣವ ಧರ್ಮಕ್ಕೆ ಕರೆತರಲು ಏರ್ಪಾಡುಮಾಡುತ್ತಾರೆ.
 • ತಿರುಕ್ಕೋಷ್ಟಿಯೂರ್ ನಂಬಿಗಳಿಂದ ಚರಮ ಶ್ಲೋಕಗಳನ್ನು ಕಲಿಯಲು ರಾಮಾನುಜರು ತಿರುಕ್ಕೋಷ್ಟಿಯೂರಿಗೆ ಪ್ರಯಾಣ ಮಾಡುತ್ತಾರೆ. ಅವರು ಅದನ್ನು ಕಲಿಯಲು ಆಸಕ್ತಿ ಹೊಂದಿರುವ ಎಲ್ಲರಿಗೂ ಕಲಿಸಿ, ತಿರುಕ್ಕೋಷ್ಟಿಯೂರ್ ನಂಬಿಗಳಿಂದ ಎಂಬೆರುಮಾನಾರ್ ಎಂಬ ಹೆಸರು ಪಡೆಯುತ್ತಾರೆ.
 • ಎಂಬೆರುಮಾನಾರ್ ತಿರುವಾಯ್ ಮೊಳಿ ಕಾಲಕ್ಷೇಪವನ್ನು ತಿರುಮಾಲೈ ಆಂಡಾನ್ ಬಳಿ ಕೇಳಿಸಿಕೊಳ್ಳುತ್ತಾರೆ.
 • ಎಂಬೆರುಮಾನಾರ್ ಪರಮೋಪಾಯ (ಆಚಾರ್ಯ) ನಿಷ್ಠೆಯನ್ನು ತಿರುವರಂಗ ಪ್ಪೆರುಮಾಳ್ ಅರೈಯರ್ ಅವರಿಂದ ಕಲಿಯುತ್ತಾರೆ.
 • ಎಂಬೆರುಮಾನಾರ್ ತಮ್ಮ ಪರಮ ಕೃಪೆಯಿಂದ ತಮ್ಮ ಅನುನಾಯಿಗಳ ಹಿತಕ್ಕಾಗಿ ಪಂಗುನಿ ಉತ್ತಿರಂ ದಿನದಂದು  ನಮ್ ಪೆರುಮಾಳ್ ಮತ್ತು ಶ್ರೀರಂಗನಾಚ್ಚಿಯಾರ್ ಅವರ ಮುಂದೆ ಶರಣಾಗತಿ ಮಾಡುತ್ತಾರೆ.
 • ಎಂಬೆರುಮಾನ್ ರಿಗೆ ವಿಷ ಮಿಶ್ರಿತ ಆಹಾರ ನೀಡಲಾಗುತ್ತದೆ. ಶ್ರೀರಂಗಕ್ಕೆ ಭೇಟಿ ನೀಡುವ ತಿರುಕ್ಕೋಷ್ಟಿಯೂರ್ ನಂಬಿಗಳು ಎಂಬೆರುಮಾನರ ಭಿಕ್ಷೆಯನ್ನು ನೋಡಿಕೊಳ್ಳಬೇಕೆಂದು ಕಿಡಾಂಬಿ ಆಚ್ಚಾನ್ ರನ್ನು ಆಜ್ಞಾಪಿಸುತ್ತಾರೆ.
 • ಎಂಬೆರುಮಾನಾರ್ ಯಜ್ಞಮೂರ್ತಿ ಅವರನ್ನು ಚರ್ಚೆಯಲ್ಲಿ ಸೋಲಿಸಿತ್ತಾರೆ. ಅರುಳಾಳ ಪ್ಪೆರುಮಾಳ್ ಎಂಬೆರುಮಾನಾರ್ ಎಂದು ಕರೆಯಲ್ಪಡುವ ಯಜ್ಞಮೂರ್ತಿಗೆ ಎಂಬೆರುಮಾನ್ ಅವರ ತಿರುವಾರಾಧನಾ ಎಂಬೆರುಮಾನ್ ಅವರ ತಿರುವಾರಾಧನ ಕೈಂಕರ್ಯವನ್ನು ನೀಡಲಾಗುತ್ತದೆ.
 • ಅರುಳಾಳ ಪ್ಪೆರುಮಾಳ್ ಎಂಬೆರುಮಾನ್ ಅವರ ಶಿಷ್ಯರಾಗುವಂತೆ ಅನಂತಾಳ್ವಾನ್ ಮತ್ತಿತರರಿಗೆ ಎಂಬೆರುಮಾನ್ ನಿರ್ದೇಶಿಸುತ್ತಾರೆ.
 • ತಿರುವೇಂಗಡಮುಡೈಯಾನ್ ರಿಗೆ ನಿತ್ಯ ಕೈಂಕರ್ಯ ನಿರ್ವಹಿಸಲು ಎಂಬೆರುಮಾನ್ ಅನಂತಾಳ್ವಾನ್ ರನ್ನು ತಿರುಮಲೈ ಗೆ ಕಳುಹಿಸುತ್ತಾರೆ.
 • ಎಂಬೆರುಮಾನ್ ತೀರ್ಥಯಾತ್ರೆಗೆ ಹೊರಟು ಕೊನೆಗೆ ತಿರುಮಲೈ ಸಂದರ್ಶಿಸುತ್ತಾರೆ.
 • ತಿರುವೇಂಗಡಮುಡೈಯಾನ್ ಓರ್ವ ವಿಷ್ಣು ಮೂರ್ತಿ (ವಿಗ್ರಹ) ಎಂದು ನಿರೂಪಿಸಿವ ಎಂಬೆರುಮಾನಾರ್ ಅದಕ್ಕೆ ವಿರೋಧವ್ಯಕ್ತಪಡಿಸಿದ ಕುದೃಷ್ಟಿಗಳನ್ನು ಸೋಲಿಸುತ್ತಾರೆ. ತಿರುವೇಂಗಡಮುಡೈಯಾನ್ ರ ಆಚಾರ್ಯರೆಂದೇ ಕೊಂಡಾಡಲ್ಪಡುವ ಅವರು, ತಿರುಮಲೈ ನಲ್ಲಿ ಜ್ಞಾನಮುದ್ರೆಯೊಂದಿಗೆ ಇರುವುದನ್ನು ನೋಡಬಹುದು.

ಎಂಬೆರುಮಾನಾರ್ – ತಿರುಮಲೈ

 • ಅಲ್ಲಿ ಅವರು ಶ್ರೀ ರಾಮಾಯಣ ಕಾಲಕ್ಷೇಪವನ್ನು ಪೆರಿಯ ತಿರುಮಲೈ ನಂಬಿಗಳಿಂದ ಕೇಳುತ್ತಾರೆ.
 • ಎಂಬೆರುಮಾನಾರ್ ಗೋವಿಂದ ಭಟ್ಟರಿಗೆ ಸಂನ್ಯಾಸಾಶ್ರಮವನ್ನು ನೀಡಿ ಅವರಿಗೆ ಎಂಬಾರ್ ಎಂಬ ಹೆಸರನ್ನು ನೀಡುತ್ತಾರೆ.
 • ಎಂಬೆರುಮಾನಾರ್ ಕೂರತ್ತಾಳ್ವಾನ್ ಅವರೊಂದಿಗೆ ಬೋಧಾಯನ ವೃತ್ತಿ ಗ್ರಂಥವನ್ನು ತರಲು ಕಾಶ್ಮೀರಕ್ಕೆ ಭೇಟಿ ನೀಡುತ್ತಾರೆ. ಅವರಿಗೆ ಗ್ರಂಥ ದೊರೆಯುತ್ತದೆ ಆದರೆ ಅಲ್ಲಿನ ದುಷ್ಟ ಪಂಡಿತರು ಎಂಬೆರುಮಾನಾರ್ ಅವರಿಂದ ಗ್ರಂಥವನ್ನು ಕಿತ್ತುಕೊಳ್ಳಲು ಸೈನಿಕರನ್ನು ಕಳುಹಿಸುತ್ತಾರೆ. ಅವುಗಳು ನಷ್ಟವಾದಾಗ, ತಾವು ಎಲ್ಲವನ್ನೂ ನೆನಪಿಟ್ಟುಕೊಂಡಿರುವುದಾಗಿ ಆಳ್ವಾನ್ ಹೇಳುತ್ತಾರೆ.
 • ಆಳ್ವಾನ್ ಅವರ ಸಹಾಯದಿಂದ ಎಂಬೆರುಮಾನಾರ್ ಶ್ರೀಭಾಷ್ಯವನ್ನು ರಚಿಸಿ ಆಳವಂದಾರರ ಮೊದಲ ಆಸೆಯನ್ನು ಪೂರ್ತಿಮಾಡುತ್ತಾರೆ.
 • ತಿರುಕ್ಕುರುಂಗುಡಿಗೆ ಎಂಬೆರುಮಾನಾರ್ ಭೇಟಿ ಮಾಡಿದಾಗ ಎಂಬೆರುಮಾನ್ ಎಂಬೆರುಮಾನಾರ್ ಅವರ ಶಿಷ್ಯರಾಗುತ್ತಾರೆ ಮತ್ತು “ಶ್ರೀವೈಷ್ಣವ ನಂಬಿ” ಎಂಬ ಹೆಸರು ಪಡೆಯುತ್ತಾರೆ.

 • ನಮ್ ಪೆರುಮಾಳ್ ರ ಪ್ರಸಾದದ ಮಹಿಮೆಯಿಂದ ಆಳ್ವಾನ್ ಮತ್ತು ಆಂಡಾಳ್ ರಿಗೆ 2 ಮಕ್ಕಳು ಜನಿಸುತ್ತಾರೆ. ಎಂಬೆರುಮಾನಾರ್ ಅವರಿಗೆ ಪರಾಶರ ಮತ್ತು ವೇದವ್ಯಾಸ ಎಂಬ ಹೆಸರುಗಳನ್ನಿಟ್ಟು ಆಳವಂದಾರರ ಎರಡನೆಯ ಬಯಕೆಯನ್ನು ಪೂರ್ತಿಮಾಡುತ್ತಾರೆ.
 • ಎಂಬಾರರ ಸಹೋದರ ಶಿರಿಯ ಗೋವಿಂದ ಪೆರುಮಾಳ್ ರಿಗೆ ಒಂದು ಮಗು ಹುಟ್ಟಿದಾಗ ಎಂಬೆರುಮಾನಾರ್ ಅದಕ್ಕೆ “ಪರಾಂಕುಶ ನಂಬಿ” ಎಂದು ನಾಮಕರಣ ಮಾಡಿ ಆಳವಂದಾರರ ಮೂರನೆಯ ಬಯಕೆಯನ್ನು ಪೂರೈಸಿದರು. ಆಳವಂದಾರರ ಮೂರನೆಯ ಬಯಕೆಯನ್ನು ಪೂರ್ತಿ ಮಾಡಲು ತಿರುವಾಯ್ಮೊಳಿ ವ್ಯಾಖ್ಯಾನ ಬರೆಯಬೇಕೆಂದು ತಿರುಕ್ಕುರುಗೈ ಪಿರಾನ್ ಪಿಳ್ಳಾನ್ ಅವರಿಗೆ ಎಂಬೆರುಮಾನಾರರು ನಿರ್ದೇಶಿಸಿದರು ಎಂದೂ ಸಹ ಹೇಳಲ್ಪಡುತ್ತದೆ.
 • ತಿರುನಾರಾಯಣಪುರಕ್ಕೆ ಪ್ರಯಾಣ ಮಾಡಿದ ಎಂಬೆರುಮಾನಾರ್, ಅಲ್ಲಿ ದೇವಾಲಯ ಪೂಜೆಯನ್ನು ಸ್ಥಾಪಿಸಿ ಅಲ್ಲಿದ್ದ ಬಹಳಷ್ಟು ಜನರನ್ನು ನಮ್ಮ ಸಂಪ್ರದಾಯಕ್ಕೆ ಕರೆತಂದರು.
 • 1000 ತಲೆಯ ಆದಿಶೇಷನ ಅವತಾರ ಮಾಡಿದ ಎಂಬೆರುಮಾನಾರ್ 1000 ಜೈನ ವಿದ್ವಾಂಸರನ್ನು ಏಕಕಾಲದಲ್ಲಿ ಸೋಲಿಸಿದರು.
 • ಮುಸಲ್ಮಾನ ರಾಜಕುಮಾರಿಯಿಂದ ಶೆಲ್ವಪಿಳ್ಳೈ ಉತ್ಸವಮೂರ್ತಿಯನ್ನು ಮರಳಿ ಪಡೆದ ಎಂಬೆರುಮಾನಾರ್, ಮುಸಲ್ಮಾನ ರಾಜಕುಮಾರಿಗೆ ಶೆಲ್ವಪಿಳ್ಳೈಯೊಂದಿಗೆ ಮದುವೆ ಮಾಡಿಸುತ್ತಾರೆ.
 • ಶೈವ ರಾಜನ ಮರಣದ ನಂತರ ಶ್ರೀರಂಗಕ್ಕೆ ಎಂಬೆರುಮಾನಾರ್ ಹಿಂತಿರುಗುತ್ತಾರೆ. ದೇವಪ್ಪೆರುಮಾಳರನ್ನು ಸ್ತೋತ್ರ ಮಾಡಿ ಕಣ್ಣುಗಳನ್ನು ಮರಳಿ ಪಡೆಯುವಂತೆ ಆಳ್ವಾನ್ ರಿಗೆ ನಿರ್ದೇಶಿಸುತ್ತಾರೆ.
 • ಎಂಬೆರುಮಾನಾರ್ ತಿರುಮಾಲಿರುಂಶೋಲೈಗೆ ಪ್ರಯಾಣ ಬೆಳೆಸಿ, ಆಂಡಾಳ್ ನ ಕೋರಿಕೆಯಂತೆ 100 ಪಾತ್ರೆ ಅಕ್ಕಾರವಡಿಸಿಲ್ ಮತ್ತು 100 ಪಾತ್ರೆ ಬೆಣ್ಣೆಯನ್ನು ಅರ್ಪಿಸಿದರು.
 • ಎಂಬೆರುಮಾನಾರ್ ಅವರು ಪಿಳ್ಳೈ ಉರುಂಗಾವಿಲ್ಲಿ ದಾಸರ್ ಅವರ ಹಿರಿಮೆಯನ್ನು ಇತರ ಶ್ರೀವೈಷ್ಣವರಿಗೆ ತೋರಿಸಿಕೊಡುತ್ತಾರೆ.
 • ಎಂಬೆರುಮಾನಾರ್ ತಮ್ಮ ಶಿಷ್ಯರಿಗೆ ಅನೇಕ ಅಂತಿಮ ನಿರ್ದೇಶನಗಳನ್ನು ನೀಡುತ್ತಾರೆ. ಪರಾಶರ ಭಟ್ಟರನ್ನು ತಮ್ಮಂತೆಯೇ ಕಾಣುವಂತೆ ತಮ್ಮ ಶಿಷ್ಯರಿಗೆ ನಿರ್ದೇಶಿಸುತ್ತಾರೆ. ಅವರು ಪರಾಶರಭಟ್ಟರಿಗೆ ನಂಜೀಯರ್ ಅವರನ್ನು ನಮ್ಮ ಸಂಪ್ರದಾಯಕ್ಕೆ ಕರೆತರುವಂತೆ ನಿರ್ದೇಶಿಸುತ್ತಾರೆ.
 • ಕೊನೆಯಲ್ಲಿ, ಆಳವಂದಾರರ ತಿರುಮೇನಿಯನ್ನು ಧ್ಯಾನ ಮಾಡುತ್ತಾ ಎಂಬೆರುಮಾನಾರ್ ತಮ್ಮ ಲೀಲೆಯನ್ನು ಲೀಲಾ ವಿಭೂತಿಯಲ್ಲಿ ಮುಗಿಸಿಕೊಂಡು, ಪರಮಪದಕ್ಕೆ ಹಿಂತಿರುಗಿ ನಿತ್ಯವಿಭೂತಿಯಲ್ಲಿ ತಮ್ಮ ಲೀಲೆಗಳನ್ನು ಮುಂದುವರೆಸುತ್ತಾರೆ.
 • ಯಾವ ರೀತಿ ಆಳ್ವಾರರ ಚರಮ ತಿರುಮೇನಿಯನ್ನು ಆಳ್ವಾರ್ ತಿರುನಗರಿಯಲ್ಲಿನ ಆದಿನಾಥನ್ ರ ದೇವಸ್ಥಾನದಲ್ಲಿ ಸಂರಕ್ಷಿಸಲ್ಪಟ್ಟಿದೆಯೊ ಅದೇ ರೀತಿ ಎಂಬೆರುಮಾನಾರರ ಚರಮ ತಿರುಮೇನಿಯನ್ನು ಶ್ರೀರಂಗಂನ ರಂಗನಾಥನ ದೇವಾಲಯದಲ್ಲಿ ಸಂರಕ್ಷಿಸಲ್ಪಟ್ಟಿದೆ (ಎಂಬೆರುಮಾನಾರ್ ಸನ್ನಿಧಿಯ ಮೂಲವರ್ ತಿರುಮೇನಿಯ ಕೆಳಗೆ).
 • ಅವರ ಎಲ್ಲಾ ಚರಮ ಕೈಂಕರ್ಯಗಳನ್ನೂ ರಂಗನಾಥನ ಬ್ರಹ್ಮೋತ್ಸವದಂತೆಯೇ ಭರ್ಜರಿಯಾಗಿ ಮಾಡಲಾಯಿತು.

ನಮ್ಮ ಸಂಪ್ರದಾಯದಲ್ಲಿ ಎಂಬೆರುಮಾನಾರ್ ರ ವಿಶಿಷ್ಟ ಸ್ಥಾನ

ನಮ್ಮ ಆಚಾರ್ಯ ರತ್ನ ಹಾರದಲ್ಲಿ ಎಂಬೆರುಮಾನಾರರನ್ನು ನಾಯಕಮಣಿ (ಮಧ್ಯಭಾಗ) ಎಂದು ಪರಿಗಣಿಸಲಾಗಿದೆ. ತಮ್ಮ ಚರಮೋಪಾಯ ನಿರ್ಣಯಂ ಎಂಬ ಕೃತಿಯಲ್ಲಿ, ನಾಯನಾರ್ ಆಚ್ಚಾನ್ ಪಿಳ್ಳೈ (ಪೆರಿಯವಾಚ್ಚಾನ್ ಪಿಳ್ಳೈ ರ ಮಗ) ಎಂಬೆರುಮಾನಾರ್ ಅವರ ಸಂಪೂರ್ಣ ವೈಭವವನ್ನು ಹೊರತಂದಿದ್ದಾರೆ. ಈ ಭವ್ಯವಾದ ಗ್ರಂಥದಿಂದ ಕೆಲವು ವಿಷಯಗಳನ್ನು ನೋಡೋಣ:

 • ಬಹಳಷ್ಟು ಆಚಾರ್ಯರ (ಎಂಬೆರುಮಾನರ ಮುಂಚಿನವರು ಹಾಗು ನಂತರದವರು) ಹೇಳಿರುವಂತೆ ಎಲ್ಲಾ ಶ್ರೀವೈಷ್ಣವರಿಗೂ ಎಂಬೆರುಮಾನರೇ ಚರಮೋಪಾಯ ಎಂದು ಸಿದ್ದವಾಗಿದೆ.
 • ನಮ್ಮ ಪೂರ್ವಾಚಾರ್ಯರೆಲ್ಲರೂ ತಮ್ಮ ಸ್ವಂತ ಆಚಾರ್ಯರ ಮೇಲೆಯೇ ಪೂರ್ಣ ಅವಲಂಬಿತರಾಗಿದ್ದರೂ, ಎಂಬೆರುಮಾನಾರ್ ಅವರ ಉತ್ತಾರಕತ್ವ ಪೂರ್ಣವಾಗಿ ಸ್ಥಾಪಿತವಾಗಿದ್ದು ಏಕೆಂದರೆ, ಎಲ್ಲರ ಆಚಾರ್ಯರೂ ತೋರಿಸಿದ್ದು “ನಾವು ಎಂಬೆರುಮಾನಾರ್ ಅವರ ಮೇಲೇಯೇ ಸಂಪೂರ್ಣವಾಗಿ ಅವಲಂಬಿತರಾಗಿರಬೇಕು” ಎಂದು.
 • ಪೆರಿಯವಚ್ಚಾನ್ ಪಿಳ್ಳೈ ಅವರೂ ಸಹ ತಮ್ಮ ಮಾಣಿಕ್ಕ ಮಾಲೈ ನಲ್ಲಿ ಹೇಳುವುದೇನೆಂದರೆ “ಆಚಾರ್ಯ ಸ್ಥಾನವು ಬಹಳ ವಿಶಿಷ್ಟವಾದುದು ಮತ್ತು ಆ ಸ್ಥಾನಕ್ಕೆ ಎಂಬೆರುಮಾನಾರ್ ಸಂಪೂರ್ಣವಾಗಿ ಅರ್ಹರು” ಎಂದು.
 • ಎಂಬೆರುಮಾನಾರ್ ಅವರ ಮುಂಚಿನ ಆಚಾರ್ಯರು ಅನುವೃತ್ತಿ ಪ್ರಸನ್ನಾಚಾರ್ಯರಾಗಿದ್ದರು. ಅಂದರೆ, ಅವರಿಗೆ ನಿರಂತರವಾಗಿ ಸೇವೆ ಮಾಡಿದಾಗ ಮಾತ್ರ ಅವರುಗಳು ಪ್ರಸನ್ನರಾಗುತ್ತಿದ್ದರು ಹಾಗು ಬೆಲೆಬಾಳುವ ಸೂಚನೆಗಳನ್ನು ನೀಡುತ್ತಿದ್ದರು ಮತ್ತು ಶಿಷ್ಯರನಾಗಿ ಸ್ವೀಕರಿಸುತ್ತಿದ್ದರು. ಆದರೆ ಕಲಿಯುಗದ ಕಷ್ಟಗಳನ್ನು ಮನಗಂಡ ಎಂಬೆರುಮಾನಾರ್ ಅವರು ಆಚಾರ್ಯರುಗಳು ಕೃಪಾಮಾತ್ರರಾಗಿರಬೇಕು ಎಂದು ಗುರುತಿಸಿದ್ದರು. ಅಂದರೆ, ಅವರುಗಳು ಕೃಪೆಯಿಂದ ಪೂರ್ಣರಾಗಿದ್ದು, ಶಿಷ್ಯರುಗಳ ಮನಸ್ಸಿನಲ್ಲಿನ ಬಯಕೆ ಎಂಬ ಒಂದೇ ಕಾರಣಕ್ಕಾಗಿ ಅವರುಗಳನ್ನು ಶಿಷ್ಯರನ್ನಾಗಿ ಸ್ವೀಕರಿಸಬೇಕು ಎಂದು.
 • ಯಾವ ರೀತಿ ಪಿತೃ ಲೋಕದಲ್ಲಿನ ಪಿತೃಗಳು ತಮ್ಮ ಕುಟುಂಬದಲ್ಲಿನ ಸತ್ ಸಂತಾನದಿಂದ (ಒಳ್ಳೆಯ ಸಂತತಿ) ಲಾಭ ಪಡೆಯುತ್ತಾರೆಯೋ ಹಾಗು ಅದೇರೀತಿ ಆ ವ್ಯಕ್ತಿಯ ನಂತರದ ಪೀಳಿಗೆಯವರೂ ಸಹ ಅದರ ಲಾಭಗಳನ್ನು ಪಡೆಯುವಂತೆ, ಎಂಬೆರುಮಾನಾರ್ ರವರ ಮುಂಚಿನ ಮತ್ತು ನಂತರದ ಆಚಾರ್ಯರುಗಳೂ ಸಹ  ಶ್ರೀವೈಷ್ಣವ ಕುಲದಲ್ಲಿ ಎಂಬೆರುಮಾನಾರ್ ಅವರ ಅವತಾರದಿಂದ ಲಾಭ ಪಡೆಯುತ್ತಾರೆ ಎಂದೂ ಸಹ ವಿವರಿಸಲಾಗಿದೆ.  ಯಾವ ರೀತಿ ವಸುದೇವ/ದೇವಕಿ, ನಂದಗೋಪ/ಯಶೋದ ಮತ್ತು ದಶರಥ/ಕೌಸಲ್ಯಾ ಕಣ್ಣನ್ ಎಂಬೆರುಮಾನ್ ಮತ್ತು ಪೆರುಮಾಳ್ ರಿಗೆ ಜನ್ಮ ನೀಡಿ ಕೃತಾರ್ಥರಾದರೋ ಅದೇ ರೀತಿ ಪ್ರಪನ್ನ ಕುಲದಲ್ಲಿ ಎಂಬೆರುಮಾನಾರ್ ಅವರ ಅವತಾರದಿಂದ ಎಂಬೆರುಮಾನಾರ್ ಅವರಿನ ಮುಂಚಿನ ಅಚಾರ್ಯರೂ ಸಹ ಕೃತಾರ್ಥರಾದರು.
 • ಎಂಬೆರುಮಾನಾರ್  ಅವರ ಅವತಾರವನ್ನು ಪೊಲಿಗ ಪೊಲಿಗ ಪೊಲಿಗ ಎಂಬ ಹತ್ತಿನಲ್ಲಿ ಭವ್ಯಗೊಳಿಸಿರುವ ನಮ್ಮಾಳ್ವಾರ್ ಅವರು ನಾಥಮುನಿಗಳಿಗೆ ಭವಿಷ್ಯದಾಚಾರ್ಯ (ಎಂಬೆರುಮಾನಾರ್) ವಿಗ್ರಹವನ್ನು ಎಂಬೆರುಮಾನಾರ್ ಅವರು ಅವತಾರ ಮಾಡುವ ಮುನ್ನವೇ ನೀಡುತ್ತಾರೆ. (ನಮ್ಮಾಳ್ವಾರ್ ಅವರ ಕೃಪೆಯಿಂದ ಮಧುರಕವಿಯಾಳ್ವಾರರು ತಾಮ್ರಪರ್ಣಿ ತೀರ್ಥವನ್ನು ಕುದಿಸಿ ಮತ್ತೊಂದು ಭವಿಷ್ಯದಾಚಾರ್ಯ ವಿಗ್ರಹವನ್ನು ಪಡೆದಿದ್ದರು).

ಭವಿಷ್ಯದಾಚಾರ್ಯ– ಆಳ್ವಾರ್ ತಿರುನಗರಿ

 • ಈ ದಿವ್ಯ ಮಂಗಳ ರೂಪವನ್ನು ಸಂರಕ್ಷಿಸಿ ಪೂಜಿಸುತ್ತಿದ್ದವರು ನಾಥಮುನಿಗಳು, ಉಯ್ಯಕೊಂಡಾರ್ ಮತ್ತು ತಿರುಕ್ಕೋಷ್ಟಿಯೂರ್ ನಂಬಿ ವರೆಗಿನ ಇತರರು (ತಾಮ್ರಪರ್ಣಿ ತೀರ್ಥವನ್ನು ಕುದಿಸಿ ಪಡೆದುಕೊಂಡಂತಹ ಮತ್ತೊಂದು ದಿವ್ಯ ಮಂಗಳ ರೂಪವನ್ನು ಆಳ್ವಾರ್ ತಿರುನಗರಿಯ ಭವಿಷ್ಯದಾಚಾರ್ಯ ಸನ್ನಿಧಿಯಲ್ಲಿ ತಿರುವಾಯ್ಮೊಳಿ ಪಿಳ್ಳೈ ಮತ್ತು ಮಣವಾಳ ಮಾಮುನಿಗಳು ಆರಾಧಿಸುತ್ತಿದ್ದರು.
 • ಪೆರಿಯ ನಂಬಿ ಹೇಳುತ್ತಾರೆ, ಯಾವ ರೀತಿ ಪೆರುಮಾಳ್ ರಘುಕುಲದಲ್ಲಿ ಜನಿಸಿ ಆ ಕುಲವನ್ನುಪ್ರಖ್ಯಾತ ಮಾಡಿದರೋ ಅದೇ ರೀತಿ ಎಂಬೆರುಮಾನಾರ್ ಪ್ರಪನ್ನಕುಲದಲ್ಲಿ ಜನಿಸಿ ಈ ಕುಲವನ್ನು ಪ್ರಖ್ಯಾತಗೊಳಿಸಿದರು ಎಂದು.
 • ಪೆರಿಯ ತಿರುಮಲೈ ನಂಬಿಗಳು ಎಂಬಾರ್ ರಿಗೆ ಹೇಳುವುದೇನೆಂದರೆ “ ನೀನು ಯಾವಗಲೂ ಎಂಬೆರುಮಾನಾರ್ ತಿರುವಡಿಗಳನ್ನೇ ಹೆಚ್ಚಾಗಿ ಯೋಚಿಸಬೇಕು ಮತ್ತು ನನಗಿಂತಲೂ ನೀನು ಎಂಬೆರುಮಾನಾರ್ ರ ಬಗ್ಗೆ ಯೋಚಿಸಬೇಕು” ಎಂದು.
 • ತಿರುಕ್ಕೋಷ್ಟಿಯೂರ್ ನಂಬಿ ತಮ್ಮ ಕೊನೆಯ ದಿನಗಳಲ್ಲಿ ಹೇಳುತ್ತಿದ್ದುದು “ಎಂಬೆರುಮಾನಾರ್ ರೊಂದಿಗೆ ಸಂಭಂಧ ಹೊಂದಿದ್ದಕ್ಕೆ ತಾವು ಅದೃಷ್ಟವಂತರು” ಎಂದು. ಹಾಗೆಯೇ ಒಂದು ಸಲ ತಿರುಮಲೈ ಆಂಡಾನ್ ಅಪಾರ್ಥ ಮಾಡಿಕೊಂಡಿದ್ದಾಗ, ಅವರಿಗೆ ತಿರುಕ್ಕೋಷ್ಟಿಯುರ್ ನಂಬಿ ಹೇಳುತ್ತಾರೆ “ನೀವು ಎಂಬೆರುಮಾನಾರ್ ರಿಗೆ ಹೊಸದೇನನ್ನೂ ಕಲಿಸುತ್ತಿಲ್ಲ ಏಕೆಂದರೆ ಅವರು ಈಗಾಗಲೇ ಸರ್ವಜ್ಞರು. ಯಾವ ರೀತಿ ಕಣ್ಣನ್ ಎಂಬೆರುಮಾನ್ ಸಾಂದೀಪನೀ ರ ಬಳಿ ಕಲಿತರೂ ಮತ್ತು ಹೇಗೆ ಪೆರುಮಾಳ್ ವಸಿಷ್ಟರ ಬಳಿ ಕಲಿತರೋ ಹಾಗೆಯೇ ಎಂಬೆರುಮಾನಾರ್ ನಮ್ಮಿಂದ ಕಲಿಯುತ್ತಿದ್ದಾರೆ” ಎಂದು.
 • ಪೇರರುಳಾಳನ್, ಪೆರಿಯ ಪೆರುಮಾಳ್, ತಿರುವೇಂಗಡಮುಡೈಯಾನ್, ತಿರುಮಾಲಿರುಂಶೋಲೈ ಅಳಗರ್, ತಿರುಕ್ಕುರುಂಗುಡಿ ನಂಬಿ ಮತ್ತಿತರರು ಸಹ ಎಂಬೆರುಮಾನಾರ್ ಅವರ ವೈಭವ/ಪ್ರಾಮುಖ್ಯತೆ ಪ್ರಕಾಶಗೊಳಿಸಿದರು ಮತ್ತು ಎಲ್ಲರಿಗೂ ಎಂಬೆರುಮಾನಾರ್ ಅವರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿರುವಂತೆ ನಿರ್ದೇಶಿಸಿದರು.
 • ಅರುಳಾಳ ಪ್ಪೆರುಮಾಳ್ ಎಂಬೆರುಮಾನಾರ್, ಆಳ್ವಾನ್, ಆಂಡಾನ್, ಎಂಬಾರ್, ವಡುಗ ನಂಬಿ, ವಂಗಿಪುರತ್ತು ನಂಬಿ, ಭಟ್ಟರ್, ನಡಾದೂರ್ ಅಮ್ಮಾಳ್, ನಂಜೀಯರ್, ನಂಬಿಳ್ಳೈ, ಮತ್ತು ಅನೇಕ ಇತರ ಆಚಾರ್ಯರು ತಮ್ಮ ಶಿಷ್ಯರಿಗೆ ತೋರಿಸಿಕೊಟ್ಟಿರುವುದೇನೆಂದರೆ “ನಾವು ಯಾವಾಗಲೂ ಎಂಬೆರುಮಾನಾರ್ ತಿರುವಡಿಗಳೇ ಶರಣಾಗಬೇಕು” ಎಂದು.
 • ನಮ್ಮ ಪೂರ್ವಾಚಾರ್ಯರು ನಮಗೆ ವಿವರಿಸುವುದೇನೆಂದರೆ ನಾವು ಯಾವಾಗಲೂ ಎಂಬೆರುಮಾನಾರ್ ರನ್ನು ಉಪಾಯ ಹಾಗು ಉಪೇಯವಾಗಿ ಯೋಚಿಸಬೇಕು ಎಂದು. ಇದನ್ನು ಚರಮೋಪಾಯ ನಿಷ್ಟೆ ಅಥವಾ ಅಂತಿಮೋಪಾಯ ನಿಷ್ಟೆ ಎನ್ನುತ್ತಾರೆ.
 • ಕೂರತ್ತಾಳ್ವಾನ್ ಅವರಿಂದ ಸುಧಾರಣೆಗೊಂಡ ತಿರುವರಂಗತ್ತಮುದನಾರ್, ಎಂಬೆರುಮಾನಾರ್ ರ ಪ್ರತಿ  ಮಹಾನ್ ಪ್ರೀತಿ ಬೆಳೆಸಿಕೊಂಡಿದ್ದರು. ತಮ್ಮ ರಾಮಾನುಜನೂಟ್ರಂದಾದಿ ಪ್ರಬಂಧದಲ್ಲಿ ತಮ್ಮ ಭಾವನೆಗಳನ್ನೆಲ್ಲಾ ಧಾರಾಕಾರವಾಗಿ ಹೊರಗಿಟ್ಟರು. ಎಂಬೆರುಮಾನಾರಿಗೆ ಯೋಗ್ಯವಾದ ಈ ವೈಭವೀಕರಣ, ಎಂಬೆರುಮಾನಾರ್ ಶ್ರೀರಂಗದಲ್ಲಿ ವಾಸಿಸುತ್ತಿರುವಾಗ ರಚಿಸಿದಂತಹ ಪ್ರಬಂಧ ಮತ್ತು ನಂಬೆರುಮಾಳ್ ತಮ್ಮ ಪುರಪ್ಪಾಡಿನ ಮುಂದೆ (ಇಂತಹ ಪುರಪ್ಪಾಡಿನ ಮುಂದೆ ಸಮಾನ್ಯವಾಗಿ ಇರುವಂತಹ) ಯಾವುದೇ ವಾದ್ಯಘೋಷದಂತಹ ಅಡಚಣೆಗಳಿಲ್ಲದೆ ಓದಬೇಕೆಂದು ನಿಯಮಿಸಿದ್ದರು. ಎಂಬೆರುಮಾನಾರರ ಖ್ಯಾತಿ ಹಾಗು ನಮ್ಮ ಸಂಪ್ರದಾಯಕ್ಕೆ ಅವರು ನೀಡಿದಂತಹ ಕೊಡುಗೆಗಳನ್ನು ಮನಗಂಡ ನಮ್ಮ ಪೂರ್ವಾಚಾರ್ಯರುಗಳು ಈ ಪ್ರಬಂಧವನ್ನು  4000 ದಿವ್ಯ ಪ್ರಭಂಧಗಳೊಡನೆ ಸೇರಿಸಿದರು. ಇದು ಮಾತ್ರವಲ್ಲದೆ, ಇದು ಪ್ರಪನ್ನ ಗಾಯಾತ್ರಿ ಎಂದು ಹೆಸರುವಾಸಿಯಾಗಿ, ಪ್ರತಿಯೋರ್ವ ಶ್ರೀವೈಷ್ಣವರೂ ದಿನಕ್ಕೆ ಒಂದು ಸಲವಾದರೂ ಸಂಪೋರ್ಣವಾಗಿ ಅನುಸಂಧಾನ ಮಾಡಲೇಬೇಕು.

ಮಣವಾಳ ಮಾಮುನಿಗಳು ತಮ್ಮ ಉಪದೇಶರತ್ನಮಾಲೆಯಲ್ಲಿ ತೋರಿಸಿಕೊಡುವುದೇನೆಂದರೆ, ನಮ್ ಪೆರುಮಾಳ್ ಸ್ವತ: ತಾವೆ ನಮ್ಮ ದರ್ಶನವನ್ನು “ಎಂಬೆರುಮಾನಾರ್ ದರ್ಶನ” ಎಂದು ಹೆಸರು ನೀಡಿದ್ದಾರೆ ಎಂದು. ಅವರು ಮತ್ತೂ ಹೇಳುವುದೇನೆಂದರೆ, ಎಂಬೆರುಮಾನಾರ್ ರ ಮುಂಚಿನ ಆಚಾರ್ಯರು ಅನುವೃತ್ತಿ ಪ್ರಸನ್ನಾಚಾರ್ಯರಾಗಿದ್ದರು ಮತ್ತು ತಮ್ಮನ್ನು ಅತ್ಯಂತ ಸಮರ್ಪಣಾ ಭಾವದಿಂದ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಕೆಲ ಶಿಷ್ಯರಿಗೆ ಮಾತ್ರ ನಿರ್ದೇಶನಗಳನ್ನು ನೀಡುತ್ತಿದ್ದರು.  ಆದರೆ ಎಂಬೆರುಮಾನಾರ್ ಇಂತಹ ಪ್ರವೃತ್ತಿಯನ್ನು ಬದಲಾಯಿಸಿದರು ಮತ್ತು ಈ ಕಲಿಯುಗದಲ್ಲಿ ಆಚಾರ್ಯರು ಕೃಪೆ ತುಂಬಿದವರಾಗಿರಬೇಕು ಎಂದು ತೋರಿಸಿಕೊಟ್ಟರು. ಸಂಸಾರದಲ್ಲಿನ ದು:ಖ ಹಾಗು ಕಷ್ಟಗಳನ್ನು ಕಂಡು, ಈ ಸಂಸಾರದಿಂದ ವಿಮುಕ್ತರಾಗಲು ಬಯಸುವಂತಹ ವ್ಯಕ್ತಿಗಳನ್ನು ಆಚಾರ್ಯರುಗಳು ಹುಡುಕಬೇಕು ಮತ್ತು ಅವರುಗಳಿಗೆ ಸಂಸಾರದಿಂದ ಮುಕ್ತರಾಗಲು ಇರುವ ಪ್ರಕ್ರಿಯೆಗಳ ಬಗ್ಗೆ ಬೆಲೆಬಾಳುವ ಅರ್ಥಗಳನ್ನು ನೀಡಬೇಕು.  ಎಂಬೆರುಮಾನಾರ್ ತಾವು ಮಾತ್ರ ಅದನ್ನು ಮಾಡಿದ್ದುದಲ್ಲದೆ,  ನಮ್ಮ ಸನಾತನ ಧರ್ಮವನ್ನು ಎಲ್ಲೆಡೆಗಳಲ್ಲಿ ಪ್ರಚುರಗೊಳಿಸಿ ಪ್ರತಿ ಒಬ್ಬರಿಗೂ ಕೃಪೆ ಮಾಡಲು 74 ಸಿಂಹಾಸನಾಧಿಪತಿಗಳನ್ನು ಸ್ಥಾಪಿಸಿದರು.

ಎಂಬೆರುಮಾನ್ ರ ವೈಭವದ ಬಗ್ಗೆ ಕ್ಷಿಪ್ರವಾಗಿ ಮಾತನಾಡುವುದು ಸುಲಭ ಆದರೆ ಎಂಬೆರುಮಾನಾರ್ ವೈಭವ ಅನಿಯಮಿತವಾದದ್ದು. ಅವರು ತಾವೇ ತಮ್ಮ ಸಾವಿರ ನಾಲಗೆಗಳಿಂದ (ಆದಿಶೇಷ ರಂತೆ) ತಮ್ಮ ವೈಭವಗಳನ್ನು ಹೇಳಲು ಅಶಕ್ತರಾಗಿರುವಾಗ, ನಾವುಗಳು ಮಾತ್ರ ನಮ್ಮ ಪೂರ್ಣ ತೃಪ್ತಿಯಾಗುವಂತೆ ಹೇಳುವುದು ಹೇಗೆ ಸಾಧ್ಯ. ನಾವು ಈ ದಿನ ಅವರ ಬಗ್ಗೆ ಮಾತನಾಡಿ (ಮತ್ತು ಓದಿ) ಅಪಾರವಾದ ಲಾಭಗಳಿಸಿಕೊಂಡಿದ್ದೇವೆ ಎಂದು ನಮ್ಮನ್ನು ನಾವು ಸಮಾಧಾನಪಡಿಸಿಕೊಳ್ಳಬಹುದು ಅಷ್ಟೆ.

ಎಂಬೆರುಮಾನಾರ್ ರ ತನಿಯನ್

ಯೋನಿತ್ಯಂ ಅಚ್ಯುತ ಪದಾಂಬುಜ ಯುಗ್ಮ ರುಕ್ಮ
ವ್ಯಾಮೋಹತಸ್ ತದಿತರಾಣಿ ತೃಣಾಯ ಮೇನೇ
ಅಸ್ಮದ್ ಗುರೋರ್ ಭಗವತೋಸ್ಯ ದಯೈಕಸಿಂಧೋ:
ರಾಮಾನುಜಸ್ಯ ಚರಣೌ ಶರಣಂ ಪ್ರಪದ್ಯ

ನಮ್ಮ ಮುಂದಿನ ಲೇಖನದಲ್ಲಿ, ಎಂಬಾರ್ ವೈಭವವನ್ನು ನೋಡೋಣ.

ಅಡಿಯೇನ್ ತಿರುನಾರಾಯಣ ರಾಮಾನುಜ ದಾಸನ್

ಸಂಗ್ರಹ – http://guruparamparai.wordpress.com/2012/09/06/emperumanar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಮಹಾ ಪೂರ್ಣ (ಪೆರಿಯ ನಂಬಿ)

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಹಿಂದಿನ ಲೇಖನದಲ್ಲಿ (https://guruparamparaikannada.wordpress.com/2018/02/21/alavandhar/) ನಾವು ಆಳವಂದಾರ್ ಬಗ್ಗೆ ಚರ್ಚಿಸಿದೆವು. ನಾವು ಈಗ ಓರಾನ್ ವಳಿ ಗುರು ಪರಂಪರೆಯಲ್ಲಿ ಮುಂದಿನ ಅಚಾರ್ಯರ ಬಗ್ಗೆ ಮುಂದುವರೆಯೋಣ.

ಪೆರಿಯ ನಂಬಿ – ಶ್ರೀರಂಗಂ

ತಿರುನಕ್ಷತ್ರಂ: ಮಾರ್ಗಳಿ, ಕೇಟ್ಟೈ

ಅವತಾರ ಸ್ಥಳಂ: ಶ್ರೀರಂಗಂ

ಆಚಾರ್ಯ: ಆಳವಂದಾರ್

ಶಿಷ್ಯರು: ಎಂಬೆರುಮಾನಾರ್, ಮಲೈ ಕುನಿಯ ನಿನ್ರಾರ್, ಆರಿಯೂರಿಲ್ ಶ್ರೀ ಶಠಗೋಪ ದಾಸರ್, ಅಣಿ ಅರಂಗತ್ತಮುದನಾರ್ ಪಿಳ್ಳೈ, ತಿರುವಾಯ್ ಕುಲಮುಡೈಯಾರ್ ಭಟ್ಟರ್, ಇತರರು.

ಇವರು ಪರಮಪದ ಹೊಂದಿದ ಸ್ಥಳ:  ಚೋಳ ದೇಶದ ಪಸಿಯದು (ಪಶುಪತಿ?) ಕೋಯಿಲ್

ಪೆರಿಯ ನಂಬಿ ಅವರು ಜನಿಸಿದ್ದು ಶ್ರೀರಂಗದಲ್ಲಿ ಮತ್ತು ಅವರು ಮಹಾ ಪೂರ್ಣ, ಪರಾಂಕುಶ ದಾಸ ಹಾಗು ಪೂರ್ಣಾಚಾರ್ಯ ಎಂದೂ ಸಹ ಕರೆಯಲ್ಪಡುತ್ತಾರೆ.

ಇವರು ಆಳವಂದಾರ್ ಅವರ ಪ್ರಧಾನ ಶಿಷ್ಯರಲ್ಲಿ ಒಬ್ಬರಾಗಿದ್ದು ಮತ್ತು ರಾಮಾನುಜರನ್ನು ಶ್ರೀರಂಗಕ್ಕೆ ಕರೆದು ತರಲು ಕಾರಣಕರ್ತರು. ಆಳವಂದಾರ್ ಅವರ ಕಾಲದ ನಂತರ, ರಾಮಾನುಜರನ್ನು ಶ್ರೀರಂಗಕ್ಕೆ ಕರೆದು ತರಲು, ಶ್ರೀರಂಗಂ ನಲ್ಲಿರುವ ಎಲ್ಲಾ ಶ್ರೀವೈಷ್ಣವರೂ ಪೆರಿಯ ನಂಬಿಯವರನ್ನು ಕೇಳಿಕೊಂಡರು. ಆದುದರಿಂದ ಅವರು ತಮ್ಮ ಸಂಸಾರವಂದಿಗರಾಗಿ ಶ್ರೀರಂಗವನ್ನು ಬಿಟ್ಟು ಕಾಂಚೀಪುರದ ಕಡೆಗೆ ಪ್ರಯಾಣವನ್ನು ಬೆಳೆಸುತ್ತಾರೆ.  ಅದೇ ಸಮಯದಲ್ಲಿ ರಾಮಾನುಜರೂ ಸಹ ಪೆರಿಯ ನಂಬಿಯನ್ನು ಕಾಣಲು ಕಾಂಚೀಪುರವನ್ನು ಬಿಟ್ಟು  ಹೊರಟಿರುತ್ತಾರೆ. ಇಬ್ಬರೂ ಮಧುರಾಂತಕದಲ್ಲಿ ಭೇಟಿ ಮಾಡಿದಾಗ ರಾಮನುಜರಿಗೆ ಪೆರಿಯ ನಂಬಿಗಳು ಅಲ್ಲಿಯೇ ಪಂಚಸಂಸ್ಕಾರವನ್ನು ಮಾಡಿಬಿಡುತ್ತಾರೆ. ಅವರು ಕಾಂಚೀಪುರಕ್ಕೆ ಹೋಗಿ ಸಂಪ್ರದಾಯದ ಅರ್ಥಗಳನ್ನು ರಾಮಾನುಜರಿಗೆ ಉಪದೇಶಿಸುತ್ತಾರೆ.  ಆದರೆ ರಾಮಾನುಜರ ಧರ್ಮಪತ್ನಿಯಿಂದಾದ ಕೆಲವು ಉಪಟಳಗಳಿಂದ, ಕಾಂಚೀಪುರವನ್ನು ತೊರೆದು ತಮ್ಮ ಸಂಸಾರದೊಂದಿಗೆ ಶ್ರೀರಂಗಕ್ಕೆ ಹಿಂತಿರುಗುತ್ತಾರೆ.

ಪೆರಿಯ ನಂಬಿ ಅವರ ಜೀವನಕ್ಕೆ ಸಂಬಂಧಿಸಿದಂತೆ ಹಲವಾರು ಘಟನೆಗಳನ್ನು ವಿವಿಧ ಪೂರ್ವಾಚಾರ್ಯ ಶ್ರೀಸೂಕ್ತಿಗಳಲ್ಲಿ ಉಲ್ಲೇಖಿಸಲಾಗಿದೆ.  ಅದರಲ್ಲಿನ ಕೆಲವನ್ನು ನಾವು ಇಲ್ಲಿ ನೋಡೋಣ:

 • ಅವರು ಆತ್ಮ ಗುಣಗಳಿಂದ ತುಂಬಿದ್ದವರು ಹಾಗು ರಾಮಾನುಜರೆಡೆಗೆ ಮಹಾನ್ ಬಾಂಧವ್ಯವನ್ನು ಹೊಂದಿದ್ದರು.  ತನ್ನ ಮಗಳು ಲೌಕಿಕ ಸಹಾಯದ ಅಪೇಕ್ಷೆಯಿಂದ ಬಂದಾಗಲೂ ಸಹ ಅವರು ಅವಳನ್ನು ರಾಮಾನುಜರ ಬಳಿ  ಪರಿಹಾರಕ್ಕಾಗಿ ಕಳುಹಿಸಿದರು
 • ಒಮ್ಮೆ ರಾಮಾನುಜರು ತಮ್ಮ ಎಲ್ಲಾ ಶಿಷ್ಯರೊಂದಿಗೆ ನಡೆದುಕೊಂಡು ಹೋಗುತ್ತಿರುವಾಗ, ಪೆರಿಯ ನಂಬಿಗಳು ಅವರ ಮುಂದೆ ದೀರ್ಘದಂಡ ಪ್ರಣಾಮವನ್ನು ಸಲ್ಲಿಸುತ್ತಾರೆ.  ತನ್ನ ಆಚಾರ್ಯನಿಂದ ಪ್ರಣಾಮಗಳನ್ನು ಸ್ವೀಕರಿಸಿದಂತೆ ಆಗುವುದು ಎಂದುಕೊಂಡ ರಾಮಾನುಜರು ಅದನ್ನು ಅಂಗೀಕರಿಸಲಿಲ್ಲ,  ಹೀಗೇಕೆ ಮಾಡಿದಿರಿ ಎಂದು ಪೆರಿಯ ನಂಬಿಗಳನ್ನು ಕೇಳಿದಾಗ ಅವರು ತಾವು ರಾಮಾನುಜರಲ್ಲಿ ಆಳವಂದಾರರನ್ನು ಕಂಡದ್ದಾಗಿ ತಿಳಿಸುತ್ತಾರೆ. ವಾರ್ತಾಮಾಲೈ ನಲ್ಲಿ ಬರುವ  “ಆಚಾರ್ಯನು ತನ್ನ ಶಿಷ್ಯರ ಮೇಲೆ ಬಹಳ ಗೌರವ ಇಟ್ಟುಕೊಳ್ಳಬೇಕು”  ಎಂಬ ವಾಕ್ಯದಂತೆ, ಪೆರಿಯ ನಂಬಿಗಳು ಅದರಂತೆಯೇ ನಡೆದಿದ್ದರು.
 •  ಮಾರನೇರಿ ನಂಬಿ (ಚತುರ್ಥ ವರ್ಣದಲ್ಲಿ ಜನಿಸಿದ್ದ ಓರ್ವ ಮಹಾನ್ ಶ್ರೀವೈಷ್ಣವ ಹಾಗು ಆಳವಂದಾರ್ ರ ಶಿಷ್ಯ) ಪರಮಪದವನ್ನು ಹೊಂದಿದಾಗ, ಆತನ ಚರಮ ಕೈಂಕರ್ಯಗಳನ್ನು ಪೆರಿಯ ನಂಬಿಗಳು ನಡೆಸಿದರು.  ಅವರ ಈ ಕಾರ್ಯವನ್ನು ಸ್ವೀಕರಿಸದ ಕೆಲ ಸ್ಥಳೀಯ ಶ್ರೀವೈಷ್ಣವರು, ಇದರ ಬಗ್ಗೆ ರಾಮಾನುಜರಲ್ಲಿ ದೂರು ನೀಡುತ್ತಾರೆ.  ರಾಮಾನುಜರು ಇದರ ಬಗ್ಗೆ ವಿಚಾರಿಸಿದಾಗ, ಪೆರಿಯ ನಂಬಿಗಳು ತಾವು ಆಳ್ವಾರ್ ತಿರುವುಳ್ಳಂ ನಂತೆ ತಿರುವಾಯ್ ಮೊಳಿಯ ಪಯಿಲುಂ ಶುಡರೊಳಿ (3.7) ಹಾಗು ನೆಡುಮಾರ್ಕ್ಕಡಿಮೈ (8.10) ದಶಕಗಳಂತೆ ನಡೆದುಕೊಂಡಿದ್ದಾಗಿ ತಿಳಿಸುತ್ತಾರೆ. ಈ ಐತೀಹ್ಯವನ್ನು ಅಳಗೀಯ ಮಣವಾಳ ಪೆರುಮಾಳ್ ನಾಯನಾರ್ ತಮ್ಮ ಆಚಾರ್ಯ ಹೃದಯದಲ್ಲಿ ತೋರಿಸಿದ್ದಾರೆ ಮತ್ತು ಗುರುಪರಂಪರಾ ಪ್ರಭಾವದಲ್ಲಿ ವಿವರಿಸಲಾಗಿದೆ.
 • ಒಮ್ಮೆ ಪೆರಿಯ ಪೆರುಮಾಳ್ ರಿಗೆ ಕೆಲವು ದುಷ್ಕರ್ಮಿಗಳಿಂದ ಅಪಾಯ ಒದಗಿದಾಗ,  ಪೆರಿಯ ಕೋಯಿಲ್ ನ ಸುತ್ತಲೂ ಪ್ರದಕ್ಷಿಣೆ ಮಾಡಲು ಪೆರಿಯ ನಂಬಿಗಳೇ ಸರಿಯಾದ ವ್ಯಕ್ತಿ ಎಂದು ನಿರ್ಧರಿಸಿದರು. ಅವರು ಕೂರತ್ತಾಳ್ವಾನನ್ನು ತಮ್ಮ ಜೊತೆ ಬರಲು ಕೇಳಿಕೊಳ್ಳುತ್ತಾರೆ ಏಕೆಂದರೆ ಪಾರತಂತ್ರ್ಯ ಸ್ವಭಾವವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಂಡವರಲ್ಲೊಬ್ಬರು ಕೂರತ್ತಾಳ್ವಾನ್ ಎಂದು. ಇದನ್ನು ನಂಬಿಳ್ಳೈ ತಮ್ಮ ತಿರುವಾಯ್ ಮೊಳಿ (7.10.5) ಈಡು ವ್ಯಾಖ್ಯಾನದಲ್ಲಿ ತೋರಿಸಿದ್ದಾರೆ.
 • ಇವೆಲ್ಲಕ್ಕಿಂತಲೂ ಮಿಗಿಲಾಗಿ, ಶೈವ ರಾಜನು ರಾಮಾನುಜರನ್ನು ತನ್ನ ಆಸ್ಥಾನಕ್ಕೆ ಆಹ್ವಾನಿಸಿದಾಗ, ಕೂರತ್ತಾಳ್ವಾನ್ ಮಾರುವೇಶದಲ್ಲಿ ಹೋಗುತ್ತಾರೆ. ಆಳ್ವಾನನ ಜೊತೆ ಬಹಳ ವೃದ್ಧ ವಯಸ್ಕರಾದ ಪೆರಿಯನಂಬಿಗಳೂ ಹೋಗುತ್ತಾರೆ.   ರಾಜನು ಕಣ್ಣುಗಳನ್ನು ಕೀಳಬೇಕೆಂದು ಮಾಡಿದ ಆಜ್ಞೆಯನ್ನು ಒಪ್ಪಿದ ಪೆರಿಯ ನಂಬಿಗಳು, ತಮ್ಮ ವೃದ್ದ ವಯಸ್ಸಿನ ಕಾರಣ ನೋವು ಸಹಿಸಲಾರದೆ ತಮ್ಮ ಜೀವವನ್ನು ತೊರೆದು ಪರಮಪದ ಸೇರುತ್ತಾರೆ. ಆದರೆ ತಮ್ಮ ಪ್ರಾಣ ತ್ಯಜಿಸುವ ಸಮಯದಲ್ಲಿ,  ನಮಗೆ ಒಂದು ಬಹು ಮುಖ್ಯ ಅಂಶವನ್ನು ತೋರಿಸಿಕೊಟ್ಟಿದ್ದಾರೆ.  ಶ್ರೀರಂಗಂ ಇನ್ನು ಕೆಲವೇ ಮೈಲಿಗಳ ದೂರದಲ್ಲಿರುವುದು ಎಂದು ಹೇಳುವ ಆಳ್ವಾನ್ ಹಾಗು ಅತ್ತುಳಾಯ್ (ಪೆರಿಯ ನಂಬಿಗಳ ಪುತ್ರಿ), ಶ್ರೀರಂಗಂ ತಲುಪುವವರೆವಿಗೂ ಪೆರಿಯನಂಬಿಗಳು ತಮ್ಮ ಉಸಿರನ್ನು ಬಿಗಿಹಿಡಿದುಕೊಂಡಿದ್ದು, ಶ್ರೀರಂಗಂನಲ್ಲಿ ದೇಹ ತ್ಯಜಿಸಬಹುದು ಎಂದು ಪ್ರಾರ್ಥಿಸಿಕೊಳ್ಳುತ್ತಾರೆ.  ಒಡನೆಯೇ ನಿಂತು ಬಿಡುವ ಪೆರಿಯ ನಂಬಿಗಳು, ತಮ್ಮ ಪ್ರಾಣವನ್ನು ಅಲ್ಲಿಯೇ ಆಗಲೇ ತ್ಯಜಿಸಿಬಿಡಲು ನಿರ್ಧರಿಸಿಬಿಡುತ್ತಾರೆ. ಯಾರಾದರೂ ಈ ಘಟನೆಯ ಬಗ್ಗೆ ತಿಳಿದು ಪ್ರಾಣವನ್ನು ತ್ಯಜಿಸಲು ಶ್ರೀರಂಗಂ (ಅಥವಾ ಯಾವುದಾದರೂ ದಿವ್ಯದೇಶ) ದಲ್ಲಿಯೇ ಇರಬೇಕು ಎಂದು ತೀರ್ಮಾನಿಸಿದರೆ ಅದು ಆ ಶ್ರೀವೈಷ್ಣವನ ವೈಭವವನ್ನು ಮಿತಿಗೊಳಿಸುತ್ತದೆ ಎಂದು ಪೆರಿಯ ನಂಬಿ ಹೇಳುತ್ತಾರೆ.    ಆಳ್ವಾರ್ ಹೇಳುವಂತೆ “ವೈಗುಂದಂ ಆಗುಂ ತಂ ಊರೆಲ್ಲಾಂ” (வைகுந்தம் ஆகும் தம் ஊரெல்லாம்) – ಎಲ್ಲೆಲ್ಲಿ ಶ್ರೀವೈಷ್ಣವರಿರುವನೊ ಆ ಸ್ಥಳವೇ ವೈಕುಂಠ ಆಗುವುದು.  ನಾವು ಎಲ್ಲಿಯೇ ಇದ್ದರೂ ಎಂಬೆರುಮಾನ್ ನ ಮೇಲೆ ಅವಲಂಬಿಸಿರುವುದೇ ಹೆಚ್ಚು ಮುಖ್ಯ –  ದಿವ್ಯ ದೇಶಗಳಲ್ಲಿ ವಾಸಿಸುವ ಬಹಳಷ್ಟು ಜನರು ಅದರ ಕೀರ್ತಿಗಳನ್ನು ಅರಿತುಕೊಳ್ಳದೇ ವಾಸಿಸುತ್ತಿದ್ದಾರೆ.  ಹಾಗೆಯೇ,  ದೂರಸ್ಥ ಸ್ಥಳಗಳಲ್ಲಿ (ಚಾಂಡಿಲಿ-ಗರುಡನ ಪ್ರಸಂಗ ನೆನೆಪಿಸಿಕೊಳ್ಳಿ) ವಾಸಿಸುವ ಇತರರು ನಿರಂತರವಾಗಿ ಎಂಬೆರುಮಾನ್ ಬಗ್ಗೆ ಚಿಂತಿಸುತ್ತಿರುತ್ತಾರೆ.

ಈ ರೀತಿ ನಾವು ಪೆರಿಯ ನಂಬಿ ಎಷ್ಟು ಉತ್ಕೃಷ್ಟವಾದವರೆಂಬುದನ್ನು ಕಾಣಬಹುದು. ಇವರು ಎಂಬೆರುಮಾನ್ ರ ಮೇಲೆ ಸಂಪೂರ್ಣವಾಗಿ ಅವಲಂಬಿತರಾಗಿದ್ದವರು. ನಮ್ಮಾಳ್ವಾರ್ ಹಾಗು ತಿರುವಾಯ್ ಮೊಳಿಯ ಮೇಲೆ ಇವರಿಗಿದ್ದ ಬಾಂಧವ್ಯದಿಂದ ಇವರನ್ನು ಪರಾಂಕುಶ ದಾಸರ್ ಎಂದೂ ಸಹ ಕರೆಯುತ್ತಾರೆ. ಇವರ ತನಿಯನ್ ನಿಂದ, ಇವರು ಶ್ರೀಯ:ಪತಿಯ ಕಲ್ಯಾಣ ಗುಣಾನುಭವದಲ್ಲಿ ಮುಳುಗಿದ್ದರೆಂದು ಮತ್ತು ಈ ಅನುಭವದಲ್ಲಿ ಸಂಪೂರ್ಣ ತೃಪ್ತಿ ಹೊದಿದ್ದರೆಂದೂ ತಿಳಿಯುತ್ತದೆ. ಅವರಂತಹುದೇ ಗುಣಗಳನ್ನು ನಮಗೂ ಸಹ ದಯಪಾಲಿಸಿ ಎಂದು ಅವರ ಪಾದಪದ್ಮಗಳಲ್ಲಿ ಬೇಡಿಕೊಳ್ಳೋಣ.

ಪೆರಿಯ ನಂಬಿ ಅವರ ತನಿಯನ್

ಕಮಲಾಪತಿ ಕಲ್ಯಾಣ ಗುಣಾಂಮೃತ  ನಿಶೇವಯಾ
ಪೂರ್ಣ ಕಾಮ್ಯ ಸತತಂ ಪೂರ್ಣಾಯ ಮಹತೇ ನಮ:

ನಮ್ಮ ಮುಂದಿನ ಲೇಖನದಲ್ಲಿ ಎಂಬೆರುಮಾನಾರ್ ವೈಭವದ ಬಗ್ಗೆ ನೋಡೋಣ.

ಅಡಿಯೇನ್ ಎಂಬಾರ್ ತಿರುನಾರಾಯಣ ರಾಮಾನುಜ ದಾಸನ್

ಸಂಗ್ರಹ – http://guruparamparai.wordpress.com/2012/09/01/periya-nambi/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org