Category Archives: AzhwArs

ಕುಲಶೇಖರ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

Kulashekhara Azhwar1

 ತಿರುನಕ್ಷತ್ರಮ್:  ಮಾಶಿ, ಪುನರ್ಪೂಸಮ್

ಅವತಾರ ಸ್ಥಲ:  ತಿರುವಂಜಿಕ್ಕಳಮ್

ಆಚಾರ್ಯನ್:  ವಿಶ್ವಕ್ಸೇನರ್

ಕೃತಿಗಳು:  ಮುಕುಂದ ಮಾಲೈ, ಪೆರುಮಾಳ್ ತಿರುಮೊಳಿ

ಪರಮಪದಕ್ಕೆ ಸೇರಿದ ಸ್ಥಳ: ಮನ್ನಾರ್ ಕೋಯಿಲ್ (ತಿರುನೆಲ್ವೇಲಿ ಹತ್ತಿರ)

ಕುಲಶೇಖರ ಆಳ್ವಾರರ ಹಿರಿಮೆ ಏನೆಂದರೆ ಅವರು ವಾಸ್ತವವಾಗಿ ಕ್ಷತ್ರಿಯ ಕುಲದಲ್ಲಿ (ಮಹಾ ಗರ್ವ ಉಂಟುಮಾಡಬಲ್ಲ ಕುಲ) ಜನಿಸಿದ್ದರೂ ಅವರು ಎಂಬೆರುಮಾನ್ ಮತ್ತು ಭಕ್ತರ ಕುರಿತು ಅತಿ ವಿನಮ್ರ ಭಾವನೆಯನ್ನು ಹೊಂದಿದ್ದರು. ಪೆರುಮಾಳ್ (ಶ್ರೀರಾಮ) ಕುರಿತು ಅವರ ಈ ಅಪಾರ ಭಕ್ತಿ ಮತ್ತು ಬಾಂಧವ್ಯದಿಂದಾಗಿ ಅವರು ಕುಲಶೇಖರ ಪೆರುಮಾಳ್ ಎಂದೇ ಹೆಸರುವಾಸಿಯಾದರು. ಅವರು ತಮ್ಮ ಪೆರುಮಾಳ್ ತಿರುಮೊಳಿಯಲ್ಲಿ, ಮೊದಲನೆಯ ಪದಿಗಂ(ಇರುಳಿಯಚ್ಚುಡರ್ ಮನಿಗಳ್) ನಲ್ಲಿ ಪೆರಿಯ ಪೆರುಮಾಳರಿಗೆ ಮಂಗಳಾಶಾಸನ ಮಾಡಿದ ನಂತರ, ಒಡನೆಯೇ ಎರಡನೆಯ ಪದಿಗಂ(ತೇಟ್ಟರುಮ್ ತಿರಲ್ ತೇನ್) ನಲ್ಲಿ ಅವರು ಶ್ರೀವೈಷ್ಣವರುಗಳನ್ನು ವೈಭವೀಕರಿಸುತ್ತಾರೆ. ಮತ್ತು ಅವರು ಶ್ರೀವೈಷ್ಣವರೊಡನೆ ಅತಿ ಬಾಂಧವ್ಯದಿಂದ ಜನಪ್ರಿಯರಾಗಿದ್ದಾರೆ. ಇದನ್ನು ನಾವು ಮುಂದಿನ ಭಾಗಗಳಲ್ಲಿ ಅವರ ಚರಿತ್ರೆಯಲ್ಲಿ ನೋಡಬಹುದು.

ಅವರು ತಮ್ಮ ಪೆರಿಯ ತಿರುಮೊಳಿಯಲ್ಲಿ ಜೀವಾತ್ಮನ ನಿಜವಾದ ಸ್ವರೂಪವು ಶೇಷತ್ವವೆಂದು ಸ್ವತ: ಕಡೆಯಲ್ಲಿ(10.7) ಹೀಗೆ ಘೋಷಿಸುತ್ತಾರೆ:  “ತಿಲ್ಲೈಣಗರ್ ಚಿತ್ತಿರಕೂಡಮ್ ತನ್ನುಳ್ ಅರಚಮರ್ಣ್ತಾನ್ ಅಡಿಚೂಡುಮ್ ಅರಚೈ ಅಲ್ಲಾಲ್ ಅರಚಾಗ ಎಣ್ಣೇನ್ ಮಟ್ರರಚು ತಾನೇ”

ಅರ್ಥಾತ್ “ನಾನು ತಿರುಚಿತ್ರಕೂಟದ ರಾಜ(ಗೋವಿಂದರಾಜನ್ ಎಮ್ಪೆರುಮಾನ್)ನ ಪಾದಾರವಿಂದವನ್ನು ಹಿಡಿದುಕೊಳ್ಳುವುದರ ಹೊರತು ಬೇರಾವುದನ್ನೂ ರಾಜತ್ವವೆಂದು ಪರಿಗಣಿಸುವುದಿಲ್ಲ”. ಈ ಹೇಳಿಕೆಯಿಂದ ಅವರು ಜೀವಾತ್ಮನ ದೇವತಾಂತರ/ವಿಷಯಾಂತರ ಸಂಬಂಧದ ಯೋಚನೆಯನ್ನು ಸ್ಪಷ್ಟವಾಗಿ ತೊಡೆದುಹಾಕುತ್ತಾರೆ.

ಅವರು ತಮ್ಮ ತಿರುವೇಂಕಟ ಪದಿಗಮ್ ನಲ್ಲಿ ಜೀವಾತ್ಮನ ಅಂತಿಮ ಸ್ವರೂಪವನ್ನು “ಅಚಿತ್ವತ್ ಪಾರತಂತ್ರ್ಯಮ್” ಎಂದೂ ಘೋಷಿಸುತ್ತಾರೆ.

4.9 ರಲ್ಲಿ ಹೀಗೆ ವಿವರಿಸುತ್ತಾರೆ:

ಚೆಡಿಯಾಯ ವಲ್ವಿನೈಗಳ್ ತೀರ್ಕ್ಕುಮ್ ತಿರುಮಾಲೇ
ನೆಡಿಯಾನೇ ವೇಙ್ಕಟವಾ! ನಿನ್ ಕೋಯಿಲಿನ್ ವಾಶಲ್
ಅಡಿಯಾರುಮ್ ವಾನವರುಮ್ ಅರಮ್ಬೈಯರುಮ್ ಕಿಡಣ್ತಿಯಙ್ಗುಮ್
ಪಡಿಯಾಯ್ಕ್ಕಿಡಣ್ತು ಉನ್ ಪವಳ ವಾಯ್ಕಾಣ್ಬೇನೇ

ಓಹ್ ಶ್ರೀವೇಂಕಟೇಶ! ನೀನೊಬ್ಬನೇ ನನ್ನ ಪ್ರಬಲವಾದ ಕರ್ಮಗಳನ್ನು ನಿರ್ಮೂಲಗೊಳಿಸಬಲ್ಲವನು. ಎಲ್ಲಿ ನಿನ್ನ ಮಹಾ ಭಕ್ತರು, ದೇವತೆಗಳು ಭೌತಿಕ ಲಾಭವನ್ನು ಅಪೇಕ್ಷಿಸುವವರು ಮತ್ತು ಅವರನ್ನು ಅವಲಂಬಿಸಿರುವವರು ನಿನ್ನ ದರ್ಶನಕ್ಕಾಗಿ ಹಾತೊರೆಯುತ್ತಾರೋ, ಆ ನಿನ್ನ ಸನ್ನಿದಿಯ ಪ್ರವೇಶದ್ವಾರದಲ್ಲಿ ನಾನು ಒಂದು ಮೆಟ್ಟಿಲಾಗಿರಲು ಬಯಸುತ್ತೇನೆ.

ಪೆರಿಯವಾಚಾನ್ ಪಿಳ್ಳೈ ಜೀವಾತ್ಮಾ ಈ ಎರಡೂ ವಿಧವಾಗಿರಬೇಕೆಂದು ವಿವರಿಸುತ್ತಾರೆ:

– (ಪಡಿಯಾಯ್ಕ್ಕಿಡನ್ತು) ಅಚಿತ್(ಅಚೇತನ) ಅರ್ಥಾತ್ ಎಂಬೆರುಮಾನ್ ಜೀವಾತ್ಮನ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿರಬೇಕು, ಹೇಗೆ ಚಂದನ(ಶ್ರೀಗಂಧ), ಕುಸುಮ(ಹೂವು), ಇತ್ಯಾದಿಗಳು ಯಾವ ಸ್ವಂತ ಆಸಕ್ತಿಯೂ ಇಲ್ಲದೆ ತಮ್ಮ ಉಪಭೋಗಿಗಳ ಸಂತೋಷಕ್ಕಾಗಿ ಮಾತ್ರ ಇರುವವೋ ಹಾಗೆ.

– (ಉನ್ ಪವಳ ವಾಯ್ಕಾಣ್ಬೇನೇ) ಚಿತ್(ಸಚೇತನ) ಅರ್ಥಾತ್ ನಾವು   ಎಂಬೆರುಮಾನನ್ನು ನಮ್ಮ ಸೇವೆಯನ್ನು ಸ್ವೀಕರಿಸಿ ಸಂತುಷ್ಟನಾಗಿದ್ದಾನೆಂದು ಗುರುತಿಸಿಕೊಳ್ಳಬೇಕು. ಹೀಗೆ ಗುರುತಿಸಿಕೊಂಡು ಪ್ಪ್ರತಿಸ್ಪಂದಿಸದಿದ್ದರೆ ನಾವು ಅಚೇತನಕ್ಕಿಂತ ಬೇರೆಯಲ್ಲ.

ಈ ತತ್ವವನ್ನು “ಅಚಿತ್ವತ್ ಪಾರತಂತ್ರ್ಯಮ್” ಎನ್ನಲಾಗಿದೆ, ಅರ್ಥಾತ್ ಜೀವಾತ್ಮನು ಎಂಬೆರುಮಾನನ ಸಂಪೂರ್ಣ ನಿಯಂತ್ರಣಕ್ಕೊಳಪಟ್ಟಿದ್ದಾನೆ ಮತ್ತು ಎಂಬೆರುಮಾನನಿಗೆ ಇನ್ನೂ ಪ್ಪ್ರತಿಸ್ಪಂದಿಸುತ್ತಿದ್ದಾನೆ – ಇದು ನಮ್ಮ ಶ್ರೀವೈಷ್ಣವ ಸಿದ್ಧಾಂತದ ಮಹತ್ತಮವಾದ ತತ್ವ.

ನಾವು ಈಗಾಗಲೇ ಮಾಮುನಿಗಳು ತಮ್ಮ ‘ಅರ್ಚಾವತಾರ ಅನುಭವಮ್’ ಲೇಖನದಲ್ಲಿ ಹೇಗೆ ಕುಲಶೇಖರ ಆಳ್ವಾರರನ್ನು ವೈಭವೀಕರಿಸಿದ್ದಾರೆಂದು ನೋಡಿ ಆನಂದಿಸಿದ್ದೇವೆ – http://ponnadi.blogspot.in/2012/10/archavathara-anubhavam-kulasekara.html.

ನಾಯನಾರರು ತಮ್ಮ ಮೇರು ಕೃತಿ ‘ಆಚಾರ್ಯ ಹೃದಯಂ’ ನಲ್ಲಿ ಯಾರೂ ಭಕ್ತರಲ್ಲಿ ಅವರ ಜನನದ ಆಧಾರದ ಮೇಲೆ ಭೇದಭಾವವನ್ನು ಮಾಡಬಾರದು ಎಂದು ಒಂದು ಚೂರ್ಣಿಕೆಗಳ ಸರಣಿಯಲ್ಲಿ ವಿವರಿಸಿದ್ದಾರೆ ಮತ್ತು ಕಡೆಯಲ್ಲಿ ನಮ್ಮಾಳ್ವಾರ್ ಹಾಗೂ ಇತರ ಶ್ರೇಷ್ಠ ವ್ಯಕ್ತಿಗಳ ಹಿರಿಮೆಯನ್ನು ಸ್ಥಾಪಿಸಿದ್ದಾರೆ. ಆ ಭಾಗದಲ್ಲಿ, ಯಾವ ಜನ್ಮವು ಭಾಗವತ ಕೈಂಕರ್ಯಕ್ಕೆ ಉತ್ತಮವಾಗಿ ಸಹಾಯಕವಾಗಿದೆ ಎಂದು ವಿವರಿಸುತ್ತಾ, ನಾಯನಾರರು ಹೇಗೆ ಅನೇಕ ಶ್ರೇಷ್ಠ ವ್ಯಕ್ತಿಗಳು ಭಾಗವತ ಕೈಂಕರ್ಯಕ್ಕೆ ಸಹಾಯಕವಾಗಲೆಂದೇ ಹೀನವೆಂದು ಕರೆಯಲ್ಪಡುವ ಕುಲಗಳಲ್ಲಿ ಜನಿಸಲು ಬಯಸಿದರು ಎಂದು ಉದಾಹರಣೆ ನೀಡುತ್ತಾರೆ. ಈಗ ನಾವು 87ನೇ ಚೂರ್ಣಿಕೆಯ ಸಾರವನ್ನು ಮತ್ತು ಅದು ಹೇಗೆ ಕುಲಶೇಖರ ಆಳ್ವಾರರಿಗೆ ಸಂಬಂಧಿಸಿದೆ ಎಂಬುದನ್ನು ನೋಡೋಣ.

ಅಣೈಯ ಊರ ಪುನೈಯ ಅಡಿಯುಮ್ ಪೊಡಿಯುಮ್ ಪಡಪ್ಪರ್ವತ ಭವನಙ್ಗಳಿಲೇ ಏತೇನುಮಾಗ ಜಣಿಕ್ಕಪ್ಪೆರುಗಿರ ತಿರ್ಯಕ್ ಸ್ಥಾವರ ಜಂಗಮಂಗಳೈ ಪೆರುಮಕ್ಕಳುಮ್ ಪೆರಿಯೋರುಮ್ ಪರಿಗ್ರಹಿತ್ತು ಪ್ಪ್ರಾರ್ಥಿಪ್ಪರ್ಗಳ್.

ನಿತ್ಯಸೂರಿಗಳಾದ ಅನಂತ, ಗರುಡ, ಇತರರು ಹಾಸಿಗೆ(ಆದಿಶೇಷ), ಪಕ್ಷಿ(ಗರುಡಾಳ್ವಾರ್), ಇತ್ಯಾದಿಗಳಾಗಿ ಜನಿಸಲು ಬಯಸುತ್ತಾರೆ. ನಮ್ಮಾಳ್ವಾರರು ಎಂಬೆರುಮಾನನಿಗೆ ತಿರುತ್ತುಳಾಯಿ(ತುಳಸಿ) ಯು ಎಷ್ಟು ಪ್ರಿಯವಾಗಿದೆಯೆಂದರೆ ಅದನ್ನು ಎಲ್ಲೆಡೆಯೂ ಧರಿಸುತ್ತಾನೆ (ತಲೆ, ಭುಜಗಳು, ಎದೆ, ಇತ್ಯಾದಿ) ಎಂದು ಗುರುತಿಸಿದ್ದಾರೆ. ಮಹಾ ಋಷಿಗಳಾದ ಪರಾಶರ, ವ್ಯಾಸ, ಶುಕ, ಮತ್ತಿತರರು ಕೃಷ್ಣ  ಮತ್ತು ಗೋಪಿಕೆಯರ ಪಾದ ಕಮಲಗಳಿಂದ ಸ್ಪರ್ಶಿಸಲ್ಪಡುವ ವೃಂದಾವನದ ಧೂಳಾಗಿ ಜನಿಸಲು ಬಯಸಿದರು. ಕುಲಶೇಖರ ಆಳ್ವಾರರು ತಿರುವೇಂಕಟಗಿರಿಯಲ್ಲಿ ಏನೊಂದಾಗಿಯಾದರೂ ಜನಿಸಲು ಬಯಸಿದರು. ಆಳವಂದಾರರು ಒಬ್ಬ ಶ್ರೀವೈಷ್ಣವರ ಮನೆಯಲ್ಲಿ ಒಂದು ಹುಳುವಾಗಿ ಜನಿಸಲು ಬಯಸಿದರು. ಈಗ ನಾವು ಕುಲಶೇಖರ ಆಳ್ವಾರರ ಬಯಕೆಯನ್ನು ಮಾಮುನಿಗಳ ಈ ಚೂರ್ಣಿಕೆಯ ವ್ಯಾಖ್ಯಾನದಲ್ಲಿ ಸ್ವಲ್ಪ ವಿವರವಾಗಿ ತಿಳಿದುಕೊಳ್ಳೋಣ.

Kulashekhara Azhwar2

ಪೆರುಮಾಳ್ ತಿರುಮೊಳಿಯ 4ನೆಯ ಪದಿಗಂ(ಭಾಗ)ನಲ್ಲಿ ಆಳ್ವಾರರು ತಿರುವೇಂಕಟಗಿರಿಯ ಜೊತೆ ಯಾವುದಾದರೂ ಒಂದು ನಿರಂತರ ಸಂಬಂಧವನ್ನು ಇಟ್ಟುಕೋಳ್ಳಲು ಬಯಸುತ್ತಾರೆ – ಅವರು ಸದಾಕಾಲವೂ ತಿರುವೇಂಕಟಗಿರಿಯೊಂದಿಗೆ ಸಂಪರ್ಕವನ್ನು ಇಟ್ಟುಕೊಳ್ಳಲು ಇಚ್ಛಿಸುತ್ತಾರೆ.

ಅವರು ಹೀಗೆ ಬಯಸುತ್ತಾರೆ:

– ಬೆಟ್ಟದ ಮೇಲಿನ ಕೊಳದಲ್ಲಿ ಒಂದು ಹಕ್ಕಿಯಾಗಿ
– ಕೊಳದಲ್ಲಿ ಒಂದು ಮೀನಾಗಿ, ಏಕೆಂದರೆ ಹಕ್ಕಿ ಹಾರಿ ಹೋಗಬಹುದು
– ಎಂಬೆರುಮಾನನಿಗೆ ಸೇವೆ ಮಾಡಲು ಒಂದು ಚಿನ್ನದ ಪಾತ್ರೆಯನ್ನು ಹಿಡಿದುಕೊಂಡವನಾಗಿ, ಏಕೆಂದರೆ ಮೀನು ಈಜಿಕೊಂಡು ಹೋಗಿಬಿಡಬಹುದು
– ಒಂದು ಮರದಲ್ಲಿ ಒಂದು ಹೂವಾಗಿ, ಏಕೆಂದರೆ ಚಿನ್ನದ ಪಾತ್ರೆಯನ್ನು ಹಿಡಿದುಕೊಳ್ಳುವುದರಿಂದ ಅದು ನನ್ನ ಮನಸ್ಸಿನಲ್ಲಿ ಅಹಂಕಾರವನ್ನು ಹುಟ್ಟಿಸಬಹುದು ಮತ್ತು ಅದರಿಂದಾಗಿ ನನ್ನನ್ನು ದೂರ ಎಳೆಯಬಹುದು.
– ಒಂದು ನಿರುಪಯುಕ್ತವಾದ ಮರವಾಗಿ, ಏಕೆಂದರೆ ಹೂವನ್ನು ಬಳಸಿದ ನಂತರ ಅದನ್ನು ಎಸೆದುಬಿಡಬಹುದು
– ತಿರುವೇಂಕಟಗಿರಿಯಲ್ಲಿ ಒಂದು ನದಿಯಾಗಿ, ಏಕೆಂದರೆ ನಿರುಪಯುಕ್ತವಾದ ಮರವನ್ನು ಎಂದಾದರೊಂದು ದಿನ ಕಿತ್ತುಹಾಕಿಬಿಡಬಹುದು
– ಸನ್ನಿಧಿಗೆ ಹೋಗುವ ದಾರಿಯಲ್ಲಿ ಮೆಟ್ಟಿಲುಗಳಾಗಿ, ಏಕೆಂದರೆ ನದಿಯು ಎಂದಾದರೊಂದು ದಿನ ಬತ್ತಿಹೋಗಬಹುದು
– ಸನ್ನಿಧಿಯ ಮುಂದೆ ಕಲ್ಲಿನ ಸೋಪಾನವಾಗಿ (ಇದರಿಂದಾಗಿ ಅದಕ್ಕೆ ಕುಲಶೇಖರ ಪಡಿ ಎಂದು ಹೆಸರಾಯಿತು), ಏಕೆಂದರೆ ಮೆಟ್ಟಿಲುಗಳ ದಾರಿಯನ್ನು ಎಂದಾದರೊಂದು ದಿನ ಬದಲಿಸಬಹುದು
– ತಿರುವೇಂಕಟದಲ್ಲಿ ನಿರಂತರವಾಗಿರುವ ಯಾವುದಾದರೊಂದು ವಸ್ತುವಾಗಿ

– ಪೆರಿಯವಾಚಾನ್ ಪಿಳ್ಳೈ ತಮ್ಮ ವ್ಯಾಖ್ಯಾನದಲ್ಲಿ ಹೀಗೆ ವಿವರಿಸಿದ್ದಾರೆ ಆಳ್ವಾರರು ತಿರುಮಲೆಯೊಂದಿಗೆ ನಿರಂತರ ಸಂಪರ್ಕವನ್ನು ಹೊಂದುವುದಕ್ಕಾಗಿ ಸ್ವತ: ತಿರುವೇಂಕಟಮುಡೈಯಾನ್(ಶ್ರೀವೆಂಕಟೇಶ) ಆಗಿರಲೂ ಸಿದ್ಧರಾಗಿದ್ದಾರೆ. ಅವರು ಭಟ್ಟರ ಉಲ್ಲೇಖವನ್ನು ಹೀಗೆ ಗುರುತಿಸುತ್ತಾರೆ “ನಾನಲ್ಲಿರುವುದು ನನಗೂ ತಿಳಿಯಬೇಕಿಲ್ಲ, ನಾನಲ್ಲಿರುವುದು ಶ್ರೀವೆಂಕಟೇಶನಿಗೂ ತಿಳಿಯಬೇಕಿಲ್ಲ ಮತ್ತು ನಾನಲ್ಲಿರುವುದನ್ನು ಯಾರೂ ವೈಭವೀಕರಿಸಬೇಕಿಲ್ಲ. ನಾನು ಯಾವುದೋ ಒಂದು ರೂಪದಲ್ಲಿ ನಿರಂತರವಾಗಿ ಅಲ್ಲಿರುವುದೇ ನನಗೆ ಸಂತೋಷವನ್ನು ನೀಡುತ್ತದೆ”.

ಕುಲಶೇಖರ ಆಳ್ವಾರರ ಹಿರಿಮೆ ಇಂಥದಾಗಿತ್ತು, ಅವರು ಯಾವುದೇ ವೈಯಕ್ತಿಕ ಅಪೇಕ್ಷೆಯಿಲ್ಲದೆ ಭಗವತ್/ಭಾಗವತ ಸಂಬಂಧಕ್ಕಾಗಿ ಗಾವಾಗಿ ಹಂಬಲಿಸುತ್ತಿದ್ದರು.

ಇದನ್ನು ಮನಸ್ಸಿನಲ್ಲಿಟ್ಟು ನಾವು ಈಗ ಅವರ ಚರಿತ್ರೆಯನ್ನು ನೋಡೋಣ.

ಶ್ರೀ ಕುಲಶೇಖರ ಪೆರುಮಾಳ್ ಗರುಡ ವಾಹನ ಪಂಡಿತರ “ದಿವ್ಯ ಸೂರಿ ಚರಿತಮ್” ನಲ್ಲಿ ತೋರಿಸಿದಂತೆ ಕೊಲ್ಲಿನಗರ್(ತಿರುವನ್ಜಿಕ್ಕಾಳಮ್) ರಾಜ್ಯದಲ್ಲಿ ಕ್ಷತ್ರಿಯ ವಂಶದಲ್ಲಿ ಶ್ರೀಕೌಸ್ತುಭದ ಒಂದು ಅಂಶವಾಗಿ ಜನಿಸಿದರು (ಆಳ್ವಾರುಗಳು ಎಂಬೆರುಮಾನನಿಂದ ಸಂಸಾರದಿಂದ ಆರಿಸಲ್ಪಟ್ಟು ದಿವ್ಯವಾಗಿ ಆಶೀರ್ವದಿಸಲ್ಲ್ಪಟ್ಟವರೂ ಕೂಡ). ಅವರಿಗೆ ಕೊಲ್ಲಿ ಕಾವಲನ್, ಕೊಳಿಯರ್ ಕೋನ್, ಕೂಡಲ್ ನಾಯಕನ್, ಇತ್ಯಾದಿ ಹೆಸರುಗಳೂ ಇವೆ.

ಅವರ ತನಿಯನ್ ನಲ್ಲಿ ವಿವರಿಸಿರುವ ಹಾಗೆ “ಮಾಟ್ರಲರೈ, ವೀರಙ್ಕೆಡುತ್ತ ಚೆಙ್ಕೋಲ್ ಕೊಲ್ಲಿ ಕಾವಲನ್ ವಿಲ್ಲವರ್ಕೋನ್, ಚೇರನ್ ಕುಲಚೇಕರನ್ ಮುಡಿವೇಣ್ತರ್ ಶಿಕಾಮಣಿ” ಅರ್ಥಾತ್ “ಅವರು ತಮ್ಮ ವೈರಿಗಳ ನಾಶಕರು, ಚೇರ ರಾಜ್ಯದ ರಾಜರು, ಅವರಿಗೆ ರಥಗಳ, ಕುದುರೆಗಳ, ಆನೆಗಳ ಮತ್ತು ಸೈನಿಕರ ಮಹಾ ಬಲವಿತ್ತು, ಮತ್ತು ತಮ್ಮ ವೈರಿಗಳನ್ನು ಹೊಡೆದೋಡಿಸಬಲ್ಲವರಾಗಿದ್ದರು”. ಅವರು ಶಾಸ್ತ್ರದ ಪ್ರಕಾರ ರಾಜ್ಯಭಾರ ಮಾಡಿದರು ಮತ್ತು ಬಲಿಷ್ಠರು ಬಲಹೀನರನ್ನು ತೊಂದರೆಪಡಿಸದಂತೆ ನೋಡಿಕೊಂಡಿದ್ದರು ಮತ್ತು ಶ್ರೀರಾಮನ ಹಾಗೆ ತಮ್ಮ ಆಳ್ವಿಕೆಯಲ್ಲಿ ಉದಾರವಾಗಿ ಮತ್ತು ವಿನಮ್ರರಾಗಿದ್ದರು.

ಒಬ್ಬ ಶ್ರೇಷ್ಠ ರಾಜನಾಗಿದ್ದರಿಂದ, ಪೂರ್ಣ ಸ್ವತಂತ್ರವಾಗಿದ್ದು ಮತ್ತು ತಮ್ಮ ರಾಜ್ಯದ ನಿಯಂತ್ರಕರಾಗಿರಬೇಕೆಂದು ಅವರು ಯೋಚಿಸಿದ್ದರು. ಸಂಸಾರ ಮತ್ತು ಪರಮಪದ ಇವೆರಡರ ಸರ್ವೋಚ್ಛ ನಿಯಂತ್ರಕನಾದ ಶ್ರೀಮನ್ ನಾರಾಯಣನು, ತನ್ನ ನಿಷ್ಕಾರಣ ಕರುಣೆಯಿಂದಾಗಿ, ಅವರಿಗೆ ನಿಷ್ಕಳಂಕವಾದ ದಿವ್ಯ ಜ್ಞಾನವನ್ನಿತ್ತು ಆಶೀರ್ವದಿಸಿದನು, ಅವರ ರಜೋ/ತಮೋ ಗುಣಗಳನ್ನು ತೊಡೆದುಹಾಕಿದನು ಮತ್ತು ಅವರನ್ನು ಸತ್ವ ಗುಣದಲ್ಲಿ ಪೂರ್ಣವಾಗಿ ನೆಲೆಸುವಂತೆ ಮಾಡಿದನು ಮತ್ತು ತನ್ನ ದಿವ್ಯ ಸ್ವರೂಪ(ನಿಜ ಸ್ವಭಾವ), ರೂಪ, ಗುಣ, ವಿಭೂತಿ(ತನ್ನ ಸಂಪತ್ತು/ನಿಯಂತ್ರಕ ಶಕ್ತಿ) ಮತ್ತು ಚೇಷ್ಠಿತ(ಲೀಲೆ) ಗಳನ್ನು ತೋರಿಸಿದನು. ಆದನ್ನು ಕಂಡು ಮತ್ತು ಅರ್ಥ ಮಾಡಿಕೊಂಡು, ಆಳ್ವಾರರು, ಪೂರ್ಣವಾಗಿ ತಮ್ಮನ್ನು ದೈಹಿಕ ಆಕಾಂಕ್ಷೆಗಳಲ್ಲಿ ತೊಡಗಿಸಿಕೊಂಡು ಭಗವದ್ವಿಷಯಗಳಲ್ಲಿ ಯಾವುದೇ ಆಸಕ್ತಿಯನ್ನು ತೋರಿಸದ, ಸಂಸಾರಿಗಳ ನಡುವೆ ಇರಲು ಅತೀವ ಸಂಕಟಪಟ್ಟರು. ನಮ್ಮಾಳ್ವಾರರು ಸಾರಿದಂತೆ ಅತಿಯಾದ ವಿಷಯ ಸಂಪತ್ತು ಇನ್ನೂ ಹೆಚ್ಚು ಹೆಚ್ಚು ವಿಷಯಾಸಕ್ತಿಯಲ್ಲಿ ತೊಡಗಿಸಿ ಮಹಾ ಅಗ್ನಿಯ ಹಾಗೆ ತನ್ನ ಒಡೆಯನನ್ನೇ ನಾಶಮಾಡುತ್ತದೆ, ಕುಲಶೇಖರ ಆಳ್ವಾರರಿಗೆ ತಮ್ಮ ರಾಜ್ಯದ ಮೇಲೆ ಮೋಹವಿರಲಿಲ್ಲ ಮತ್ತು ವಿಭೀಷಣನು ತನ್ನ ಎಲ್ಲ ಸಂಪತ್ತನ್ನೂ ತೊರೆದು ಶ್ರೀರಾಮನಿಗೆ ಶರಣಾಗತನಾದಂತೆ, ಎಲ್ಲದರಿಂದಲೂ ದೂರವಾಗಿದ್ದರು.

ಅವರು ಶ್ರೀರಂಗಂ ಮತ್ತು ಶ್ರೀರಂಗನಾಥನ ಪರ ಅತೀವ ಒಲುಮೆಯನ್ನು ಬೆಳೆಸಿಕೊಂಡಿದ್ದರು, ಮತ್ತು ಲೌಕಿಕ ವಿಷಯಗಳಿಂದ ಸಂಪುರ್ಣವಾಗಿ ದೂರವಾಗಿದ್ದು ಮತ್ತು ತಮ್ಮ ಕಾಲವನ್ನು ಶ್ರೀರಂಗನಾಥನ ವೈಭವಗಳನ್ನು ಸ್ತುತಿಸುವುದರಲ್ಲೇ ಕಳೆಯುತ್ತಿದ್ದ ಶ್ರೀ ರಂಗನಾಥನ ಭಕ್ತರಲ್ಲಿ ಇನ್ನೂ ಹೆಚ್ಚು ಒಲುಮೆಯನ್ನು ಬೆಳೆಸಿಕೊಂಡಿದ್ದರು. ಅವರು ಸಾಧುಗಳೆಂದು(ವೈಷ್ಣವ ಅಗ್ರೇಸ) ಹೆಸರಾದ ಮತ್ತು “ಅಣ್ಣಿಯರಙ್ಗನ್ ತಿರುಮುಟ್ರತ್ತು ಅಡಿಯಾರ್” ಗಳೆಂದು ಗುರುತಿಸಲ್ಪಡುವ – ಅರ್ಥಾತ್ ತಮ್ಮ ಸಂಪೂರ್ಣ ಜೀವನವನ್ನು ಶ್ರೀರಂಗನಾಥನ ದೇವಸ್ಥಾನದಲ್ಲೆ ಕಳೆಯುವ ಭಕ್ತರು – ಶ್ರೀವೈಷ್ಣವರ ನಡುವೆ ಜೀವಿಸಬೇಕೆಂದು ಬಯಸಿದ್ದರು. ಶ್ರೀರಂಗ ಯಾತ್ರೆ ಮತ್ತು ಶ್ರೀರಂಗಕ್ಕೆ ಹೋಗುವ ಬಯಕೆಯೇ ಪರಮಪದವನ್ನು ನೀಡುವುದೆಂದು ತಿಳಿದಿರುವಾಗ, ಶ್ರೀರಂಗಂನಲ್ಲಿ ಜೀವಿಸುದರ ಬಗ್ಗೆ ಹೇಳುವುದೇನಿದೆ; ಅವರು ಪ್ರತಿದಿನ ಶ್ರೀರಂಗಕ್ಕೆ ಹೋಗುವುದರ ಬಗ್ಗೆ ಯೋಚಿಸುತ್ತಿದ್ದರು.

ಅದಲ್ಲದೆ, ಪವಿತ್ರ ನದಿಗಳದ ಗಂಗಾ, ಯಮುನಾ, ಇತ್ಯಾದಿಗಳಿಗಿಂತ ಶ್ರೇಷ್ಠವೆಂದು ಶ್ಲಾಘಿಸಲ್ಪಟ್ಟ ಸ್ವಾಮಿ ಪುಷ್ಕರಿಣಿಯಿರುವ ತಿರುವೇಂಕಟಮ್(ತಿರುಮಲೆ) ಬಗ್ಗೆ ಅವರು ಅತಿಯಾದ ಮಮತೆಯನ್ನು ಬೆಳೆಸಿಕೊಂಡಿದ್ದರು. ಆಂಡಾಳ್ ಹೇಳಿದಂತೆ “ವೇಙ್ಕಟತ್ತೈಪ್ಪತಿಯಾಗ ವಾಳ್ವೀರ್ಗಾಳ್”, ಅರ್ಥಾತ್ ಎಲ್ಲಿ ಶ್ರೇಷ್ಠ ಮಹರ್ಷಿಗಳು ಮತ್ತು ಮಹಾತ್ಮರು ಶಾಶ್ವತವಾಗಿ ನೆಲೆಸಿದ್ದಾರೋ ಆ ತಿರುವೇಂಕಟವನ್ನು ನಾವು ನಮ್ಮ ಶಾಶ್ವತ ನೆಲೆಯನ್ನಾಗಿ ಮಾಡಿಕೊಳ್ಳಬೇಕು. ನಾವು ಈಗಾಗಲೇ ಆರಂಭದಲ್ಲಿ ನೋಡಿದಂತೆ ಅವರು ಈ ದಿವ್ಯದೇಶದಲ್ಲಿ ಒಂದು ಪಕ್ಷಿಯಾಗಿ, ಒಂದು ಮರವಾಗಿ, ಅಥವಾ ಒಂದು ಕಲ್ಲಾಗಿಯಾದರೂ ಇರಲು ಬಯಸಿದರು. ಇದಕ್ಕೂ ಮೀರಿ ಅವರು ಅನೇಕ ದಿವ್ಯದೇಶಗಳಲ್ಲಿ ಅರ್ಚಾವತಾರ ಎಮ್ಪೆರುಮಾನ್ ಮತ್ತು ಆತನ ಭಕ್ತರ ಸೇವೆ ಮಾಡುತ್ತಾ ಜೀವಿಸಲು ಬಯಸಿದ್ದರು.

ಅನೇಕ ಪುರಾಣಗಳು, ಇತಿಹಾಸಗಳು, ಇತ್ಯಾದಿಗಳನ್ನು ವಿಶ್ಲೇಷಿಸಿ ಮತ್ತು ಪರೀಕ್ಷಿಸಿದ ನಂತರ ಅವರು “ಮುಕುಂದ ಮಾಲಾ” ಎಂಬ ಸಂಸ್ಕೃತ ಶ್ಲೋಕ ಗ್ರಂಥವನ್ನು ದಯಪಾಲಿಸಿದರು. ಶ್ರೀರಾಮಾಯಣದ ಹಿರಿಮೆಯು ಈ ಕೆಳಗಿನ ಶ್ಲೋಕದಲ್ಲಿ ವಿವರಿಸಲ್ಪಟ್ಟಿದೆ:

ವೇದ ವೇದ್ಯೇ ಪರೇ ಪುಂಸಿ ಜಾತೇ ದಶರಥಾತ್ಮಜೇ
ವೇದ: ಪ್ರಾಚೇತಸಾದಾಸೀತ್ ಸಾಕ್ಷಾತ್ ರಾಮಾಯಣತ್ಮನಾ

ವೇದದಿಂದ ಅರಿಯಲ್ಪಡಬಹುದಾದ ಶ್ರೀಮನ್ ನಾರಾಯಣನು ಹೇಗೆ ಶ್ರೀರಾಮ (ದಶರಥಾತ್ಮಜ)ನಾಗಿ ಅವತರಿಸಿದನೋ ಹಾಗೆ ವೇದವೇ ಶ್ರೀ ವಾಲ್ಮೀಕಿಯಿಂದ ಶ್ರೀ ರಾಮಾಯಣವಾಗಿ ಅವತರಿಸಿತು.

Kulashekhara Azhwar3

ಆಳ್ವಾರರು ಶ್ರೀರಾಮಾಯಣವನ್ನು ಕೇಳುವುದು ಮತ್ತು ಅದರ ಪ್ರವಚನ ಮಾಡುವುದನ್ನು ತಮ್ಮ ದಿನಚರಿಯನ್ನಾಗಿ ಮಾಡಿಕೊಂಡರು. ಕೆಲವೊಮ್ಮೆ ಶ್ರೀರಾಮಾಯಣದಲ್ಲಿ ಎಷ್ಟು ತಲ್ಲೀನರಾಗಿರುತ್ತಿದ್ದರೆಂದರೆ ತಮ್ಮನ್ನು ತಾವೇ ಮರೆತುಬಿಡುತ್ತಿದ್ದರು. ಒಮ್ಮೆ ಪ್ರವಚನಕಾರರು ಶ್ರೀರಾಮಾಯಣದ ಒಂದು ಪ್ರಸಂಗವನ್ನು ವಿವರಿಸುತ್ತಾರೆ, ಅದರಲ್ಲಿ ಖರ/ದೂಷಣರ ಕೆಳಗೆ 14000 ರಾಕ್ಷಸರು ಶ್ರೀರಾಮನ ಜೊತೆ ಯುದ್ಧಕ್ಕೆ ಸಿದ್ಧತೆ ನಡೆಸಿದ್ದಾರೆ ಮತ್ತು ಶ್ರೀರಾಮನು ಸೀತಾದೇವಿಯನ್ನು ಇಳಯ ಪೆರುಮಾಳ್(ಲಕ್ಷ್ಮಣನ) ರಕ್ಷಣೆಯಲ್ಲಿ ಒಂದು ಗುಹೆಯಲ್ಲಿ ಬಿಟ್ಟಿದ್ದಾನೆ ಮತ್ತು ಎಲ್ಲಾ  ಋಷಿಗಳು ಶ್ರೀರಾಮನು 14000 ರಾಕ್ಷಸರ ಮೇಲೆ ಏಕಾಂಗಿಯಾಗಿ ಹೋರಾಡಬೇಕಾದ ಪರಿಸ್ಥಿತಿಯನ್ನು ಕಂಡು ಭಯಭೀತರಾಗಿದ್ದಾರೆ. ಆಳ್ವಾರರು ಇದರಿಂದ ಭಾವಪರವಶರಾಗಿ ತಕ್ಷಣವೇ ತಮ್ಮ ಸೇನೆಗೆ ಶ್ರೀರಾಮನಿಗೆ ಸಹಾಯಕ್ಕಾಗಿ ಯುದ್ಧಕ್ಕೆ ಸಿದ್ಧರಾಗಲು ಮತ್ತು ಯುದ್ಧಭೂಮಿಯ ಕಡೆಗೆ ಹೊರಡಲು ಆಜ್ಞಾಪಿಸುತ್ತಾರೆ. ಇದನ್ನು ನೋಡಿ, ಅವರ ಮಂತ್ರಿಗಳಲ್ಲಿ ಕೆಲವರು, ಕೆಲವು ಜನರಿಗೆ ಎದುರು ದಿಕ್ಕಿನಿಂದ ಬಂದು “ಶ್ರೀರಾಮನು ಯುದ್ಧವನ್ನು ಈಗಾಗಲೇ ಜಯಿಸಿಯಾಗಿದೆ ಮತ್ತು ಸೀತಾದೇವಿಯು ಶ್ರೀರಾಮನ ಗಾಯಗಳಿಗೆ ಮೃದುವಾಗಿ ಶುಶ್ರೂಷೆ ಮಾಡುತ್ತಿದ್ದಾರೆ ಮತ್ತು ಇನ್ನು ಅಲ್ಲಿಗೆ ಹೋಗಬೇಕಾಗಿಲ್ಲ” ಎಂಬ ಮಾಹಿತಿಯನ್ನು ಅವರಿಗೆ ಕೊಡಲು ವ್ಯವಸ್ಥೆ ಮಾಡುತ್ತಾರೆ. ಆಳ್ವಾರರು ತೃಪ್ತಿಗೊಂಡು ತಮ್ಮ ರಾಜ್ಯಕ್ಕೆ ಹಿಂತಿರುಗುತ್ತಾರೆ.

ಅವರ ಮಂತ್ರಿಗಳು ಆಳ್ವಾರರ ನಡವಳಿಕೆಯ ಬಗ್ಗೆ ಚಿಂತಿಸಲು ಆರಂಭಿಸುತ್ತಾರೆ ಮತ್ತು ಇದು ಅವರ ಶ್ರೀವೈಷ್ಣವರೊಂದಿಗಿನ ಸಹವಾಸದ ಪರಿಣಾಮ ಎಂದು ನಿರ್ಣಯಿಸುತ್ತಾರೆ. ಅವರು ಆ ಶ್ರೀವೈಷ್ಣವರನ್ನು ಓಡಿಸಲು ನಿರ್ಧರಿಸುತ್ತಾರೆ ಮತ್ತು ಅದಕ್ಕಾಗಿ ಒಂದು ಯೋಜನೆಯನ್ನು ರೂಪಿಸುತ್ತಾರೆ. ಅವರು ಆಳ್ವಾರರ ತಿರುವಾರಾಧನ ಕೊಠಡಿಯಿಂದ ಒಂದು ವಜ್ರದ ಹಾರವನ್ನು ಅಪಹರಿಸುತ್ತಾರೆ ಮತ್ತು ಆಳ್ವಾರರ ಆಪ್ತಮಿತ್ರ ಶ್ರೀವೈಷ್ಣವರು ಅದನ್ನು ಅಪಹರಿಸಿರಬೇಕೆಂದು ಸಾರುತ್ತಾರೆ. ತಕ್ಷಣವೇ ಆಳ್ವಾರರು ಒಂದು ವಿಷಸರ್ಪದಿಂದ ಕೂಡಿದ ಮಡಕೆಯನ್ನು ತರಲು ಆಜ್ಞಾಪಿಸುತ್ತಾರೆ ಮತ್ತು ಅದು ಬಂದ ಒಡನೆಯೇ ತಮ್ಮ ಕೈಯನ್ನು ಅದರೊಳಗೆ ಹಾಕುತ್ತಾರೆ ಮತ್ತು “ಶ್ರೀವೈಷ್ಣವರು ಇಂಥ ಕೃತ್ಯಗಳಲ್ಲಿ ತೊಡಗುವುದಿಲ್ಲ” ಎಂದು ಘೋಷಿಸುತ್ತಾರೆ – ಆ ಹಾವು ಅವರ ಪ್ರಾಮಾಣಿಕತೆಯಿಂದಾಗಿ ಅವರನ್ನು ಕಚ್ಚುವುದಿಲ್ಲ ಮತ್ತು ಮಂತ್ರಿಗಳು ನಾಚಿಕೆಯಿಂದ ತಲೆತಗ್ಗಿಸುತ್ತಾರೆ, ಹಾರವನ್ನು ಹಿಂತಿರುಗಿಸುತ್ತಾರೆ, ಮತ್ತು ಆಳ್ವಾರರ ಮತ್ತು ಶ್ರೀವೈಷ್ಣವರ ಕ್ಷಮಾಪಣೆಯನ್ನು ಕೇಳುತ್ತಾರೆ.

ತರುವಾಯ, ಆಳ್ವಾರರು ಸಂಸಾರಿಗಳ ನಡುವೆ ಜೀವಿಸಲು ಅತಿ ಯಾತನೆ ಅನುಭವಿಸುತ್ತಾರೆ, ಶೌನಕ ಸಂಹಿತೆಯಲ್ಲಿ ಹೇಳಿರುವಂತೆ “ಒಬ್ಬ ಪ್ರಪನ್ನನಿಗೆ ಭಗವಾನನನ್ನು ಸ್ತುತಿಸದ ಜನರೊಂದಿಗೆ ಇರುವುದು, ಒಂದು ಬೆಂಕಿಯ ಚೆಂಡಿನಲ್ಲಿರುವುದಕ್ಕಿಂತ ಕಷ್ಟಕರವಾದದ್ದು”. ನಂತರ ಅವರು ತಮ್ಮ ಮಗನಿಗೆ ರಾಜ್ಯದ ಪಟ್ಟಾಭಿಷೇಕ ಮಾಡಿ, ಎಲ್ಲ ಜವಾಬ್ದಾರಿಗಳನ್ನು ಕೈಗೊಪ್ಪಿಸುತ್ತಾರೆ ಮತ್ತು ಹೀಗೆ ಸಾರುತ್ತಾರೆ “ಆನಾಥ ಚೆಲ್ವತ್ತು ಅರಮ್ಬೈಯರ್ಗಳ್ ತರ್ಚೂಳ ವಾನಾಳುಮ್ ಚೆಲ್ವಮುಮ್ ಮಣ್ಣರಚುಮ್ ಯಾನ್ ವೇಣ್ಡೇನ್”, ಅರ್ಥಾತ್ ಇನ್ನು ಮುಂದೆ ಅವರಿಗೆ ಅನೇಕ ಸೇವಕರು ಮತ್ತು ಮನೋರಂಜಕರಿಂದ ಆವರಿಸಲ್ಪಟ್ಟ ಅಪಾರ ಸಂಪತ್ತಿನ ಮೇಲೆ ಅಧಿಕಾರದ ಆಸೆಯಿಲ್ಲ. ನಂತರ ಅವರು ತಮ್ಮ ಆಪ್ತ ಶ್ರೀವೈಷ್ಣವ ಮಿತ್ರರೊಡನೆ ಶ್ರೀರಂಗಕ್ಕೆ ಹೊರಡುತ್ತಾರೆ, ಮತ್ತು ಚಿನ್ನದ ತಟ್ಟೆಯ ಮೇಲೆ ಇರಿಸಿರುವ ಒಂದು ವಜ್ರಡಂತೆ ಕಾಣುವ (ಆದಿಶೇಷನ ಮೇಲೆ ಪವಡಿಸಿರುವ) ಮತ್ತು ಎಲ್ಲರ ಯೋಗಕ್ಷೇಮವನ್ನು ಯಾವಾಗಲೂ ಎದುರು ನೋಡುತ್ತಿರುವ ಶ್ರೀರಂಗನಾಥನಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ಪ್ರತಿ ಕ್ಷಣವೂ ಅವರು ಎಂಬೆರುಮಾನನ್ನು ಸ್ತುತಿಸುತ್ತಾರೆ ಮತ್ತು ತಮ್ಮ ಹೊರಹೊಮ್ಮುವ ಭಾವನೆಗಳ ಪರಿಣಾಮವಾಗಿ ಪೆರುಮಾಳ್ ತಿರುಮೊಳಿಯನ್ನು ರಚಿಸುತ್ತಾರೆ ಮತ್ತು ಅದನ್ನು ಪ್ರತಿಯೊಬ್ಬರಿಗೂ ಅನುಗ್ರಹಿಸುತ್ತಾರೆ ಮತ್ತು ಅವರನ್ನು ಉದ್ಧರಿಸುತ್ತಾರೆ. ಸ್ವಲ್ಪ ಸಮಯದ ನಂತರ ಅವರು ಈ ಸಂಸಾರವನ್ನು ತ್ಯಜಿಸುತ್ತಾರೆ ಮತ್ತು ಪರಮಪದನಾಥನ ದಿವ್ಯ ನೆಲೆಗೆ ತಲುಪುತ್ತಾರೆ ಮತ್ತು ಅಲ್ಲಿ ಆತನಿಗೆ ನಿರಂತರ ಸೇವೆ ಸಲ್ಲಿಸುತ್ತಾರೆ.

ಅವರ ತನಿಯನ್:

ಗುಶ್ಯತೇ ಯಸ್ಯ ನಗರೇ ರಂಗಯಾತ್ರಾ ದಿನೇ ದಿನೇ
ತಮಹಮ್ ಶಿರಸಾ ವಂದೇ ರಾಜಾನಮ್ ಕುಲಶೇಖರಮ್

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಈಗಾಗಲೇ ಚರ್ಚಿಸಲಾಗಿದೆ: http://ponnadi.blogspot.in/2012/10/archavathara-anubhavam-kulasekara.html

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://guruparamparai.wordpress.com/2013/01/18/kulasekara-azhwar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org
ಪ್ರಮಾತಾ (ಭೋಧಕರು) – http://acharyas.koyil.org
ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಮಧುರಕವಿ ಆಳ್ವಾರ್

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

MadhuraKavi Azhwar1ತಿರುನಕ್ಷತ್ರಮ್:  ಚಿತ್ತಿರೈ, ಚಿತ್ತಿರೈ

ಅವತಾರ ಸ್ಥಳ:  ತಿರುಕ್ಕೋಳೂರ್

ಆಚಾರ್ಯನ್:  ನಮ್ಮಾಳ್ವಾರ್

ಕೃತಿಗಳು:  ಕಣ್ಣಿನುಣ್ ಚಿರುತ್ತಾಮ್ಬು

ಪರಮಪದಕ್ಕೆ ಸೇರಿದ ಸ್ಥಳ: ಆಳ್ವಾರ್ ತಿರುನಗರಿ

ನಂಪಿಳ್ಳೈ ತಮ್ಮ ವ್ಯಾಖ್ಯಾನ ಅವತಾರಿಕೆಯಲ್ಲಿ ಮಧುರಕವಿ ಆಳ್ವಾರರ ವೈಭವಗಳನ್ನು ಸುಂದರವಾಗಿ ತೆರೆದಿಟ್ಟಿದ್ದಾರೆ. ಅದರ ಕುಡಿನೋಟ ಇಲ್ಲಿದೆ.

ಋಷಿಗಳು ತಮ್ಮ ದೃಷ್ಟಿಯನ್ನು ಸಾಮಾನ್ಯ ಶಾಸ್ತ್ರಗಳ ಮೇಲೆ ಕೇಂದ್ರೀಕರಿಸಿದ್ದಾರೆ; ಅವುಗಳು ಪುರುಷಾರ್ಥ (ಆತ್ಮದ ಗುರಿ ಸಾಧನೆ) ಗಳಾದ ಐಶ್ವರ್ಯ, ಕೈವಲ್ಯ ಮತ್ತು ಭಗವತ್ ಕೈಂಕರ್ಯ ಗಳನ್ನು ಪ್ರತಿಪಾದಿಸುತ್ತವೆ. ಆಳ್ವಾರ್ ಗಳು ತಮ್ಮ ದೃಷ್ಟಿಯನ್ನು ಉತ್ತಮ ಪುರುಷಾರ್ಥದ (ಅಂತಿಮ ಗುರಿ ಸಾಧನೆ) ಮೇಲೆ ಕೇಂದ್ರೀಕರಿಸಿದ್ದಾರೆ; ಅದೆಂದರೆ ಶ್ರೀಮನ್ನಾರಾಯಣನಿಗೆ ಪ್ರೀತಿಯ ಸೇವೆ. ಮಧುರಕವಿ ಆಳ್ವಾರರು ತಮ್ಮ ದೃಷ್ಟಿಯನ್ನು ಭಗವತ್ ಕೈಂಕರ್ಯದಲ್ಲಿ ಅತ್ಯುಚ್ಚ ವಾದ ಭಾಗವತ ಕೈಂಕರ್ಯ ದಲ್ಲಿ ಕೇಂದ್ರೀಕರಿಸಿದರು – ಭಗವಂತನು ಸಹಜವಾಗಿಯೇ ತನ್ನ ಭಕ್ತರಿಗೆ ಮಾಡುವ ಸೇವೆಯನ್ನು ತನಗೆ ಮಾಡುವ ಸೇವೆಗಿಂತ ಅಧಿಕವಾಗಿ ಮೆಚ್ಚುತ್ತಾನೆ.

ನಾವು ಇದನ್ನು ಶ್ರೀ ರಾಮಾಯಣದಲ್ಲಿ ಸಹ ಕಾಣಬಹುದು. ಶ್ರೀ ರಾಮಾಯಣವು ವೇದ ಉಪಬ್ರಹ್ಮಣ (ವೇದಗಳ ಗಹನವಾದ ಅರ್ಥಗಳನ್ನು ವಿವರಿಸು ವಂತಹದು) ಆಗಿರುವುದರಿಂದ, ಅದು ವೇದಗಳ ಮುಖ್ಯ ಅಂಶಗಳನ್ನು ಪ್ರತಿಷ್ಠಾಪಿಸುತ್ತದೆ.

 • ಭಗವಾನ್(ಶ್ರೀ ರಾಮ) ಧರ್ಮದ ಸಾಕಾರ ರೂಪ. ಆದ್ದರಿಂದ ಆತನು ಸಾಮಾನ್ಯ ಧರ್ಮಗಳಾದ “ಪಿತೃವಚನ ಪರಿಪಾಲನ” ಮುಂತಾದವುಗಳನ್ನು ಪ್ರತಿಪಾದಿಸಿದನು.
 • ಇಳಯ ಪೆರುಮಾಳ್(ಲಕ್ಷ್ಮಣನು) ವಿಶೇಷ ಧರ್ಮವಾದ ಶೇಷತ್ವವನ್ನು ಪ್ರತಿಪಾದಿಸಿದನು – ಅoದರೆ ಶೇಷನು(ಸೇವಕನು) ನಿರಂತರವಾಗಿ ಶೇಷಿಯನ್ನು(ಯಜಮಾನನನ್ನು) ಅನುಸರಿಸುವುದು.
 • ಶ್ರೀ ಭರತಾಳ್ವಾನ್ (ಭರತನು) ಪಾರತಂತ್ರ್ಯವನ್ನು – ಜೀವಾತ್ಮನ ನಿಜವಾದ ಸ್ವರೂಪವನ್ನು – ಪ್ರತಿಪಾದಿಸಿದನು. ಪಾರತಂತ್ರ್ಯವೆಂದರೆ ತನ್ನ ನಿರೀಕ್ಷೆಗಳೊಂದು ಇಲ್ಲದೆ ಪೂರ್ಣವಾಗಿ ಒಡೆಯನ ಅಭಿಲಾಷೆಗಳನ್ನು ನೆರವೇರಿಸುವುದು. ಭಗವಂತನ ಬಯಕೆಯು ಭರತನು ಅಯೋಧ್ಯೆಯಲ್ಲಿಯೇ ಇದ್ದು ರಾಜ್ಯವನ್ನು ಪಾಲಿಸಬೇಕೆಂದಿದ್ದರಿಂದ ಭರತನು ಅದನ್ನು ತನ್ನ ಸರ್ವೋಚ್ಛ ಆಜ್ಞೆಯಂತೆ ಸ್ವೀಕರಿಸಿದನು ಮತ್ತು 14 ವರ್ಷಗಳ ಕಾಲ ಅಯೋಧ್ಯೆಯ ಹೊರಗೆ ನೆಲೆಸಿ ಶ್ರೀ ರಾಮನ ಉಡುಪು ಮತ್ತು ಅನುಷ್ಠಾನಗಳನ್ನು ಅನುಸರಿಸಿದನು.
 • ಶ್ರೀ ಶತ್ರುಘ್ನಾಳ್ವಾನ್(ಶತ್ರುಘ್ನನು) ನಮ್ಮ ಸ್ವರೂಪದ ಸಾರವಾದ ಭಾಗವತ ಶೇಷತ್ವವನ್ನು ಪ್ರತಿಪಾದಿಸಿದ್ದಾನೆ. ಆತನು ಸುಮ್ಮನೆ ಭರತನನ್ನು ಅನುಸರಿಸಿಕೊಂಡು ಬೇರೆ ಯಾವುದರಲ್ಲೂ ಆಸಕ್ತಿ ತೋರಿಸದೆ ಅವನ ಸೇವೆಯನ್ನು ಮಾಡುತ್ತಿದ್ದನು.

ಭರತನಿಗೆ ಶತ್ರುಘ್ನನ ಸಂಪೂರ್ಣ ಶರಣಾಗತಿಯಿಂದಾಗಿ, ಶ್ರೀ ರಾಮನಿಗೆ ಅವನು ಇನ್ನಿಬ್ಬರು ಸಹೋದರರಿಗಿಂತ(ಲಕ್ಶ್ಮಣ ಮತ್ತು ಭರತ) ಅಧಿಕ ಪ್ರಿಯನಾಗಿದ್ದನು. ಮಧುರಕವಿ ಆಳ್ವಾರರು ಶತ್ರುಘ್ನಾಳ್ವಾನನಂತೆ ಭಾಗವತ ನಿಷ್ಥೆಯಲ್ಲಿ ಪೂರ್ಣವಾಗಿ ಸ್ಥಾಪಿತರಾಗಿದ್ದರು. ಮಧುರಕವಿ ಆಳ್ವಾರರೂ ಸಹ ನಮ್ಮಾಳ್ವಾರರಿಗೆ ಸಂಪೂರ್ಣ ಶರಣಾಗತರಾಗಿದ್ದರು ಮತ್ತು ಅವರಿಗೆ ಪೂರ್ಣ ಸೇವೆಯನ್ನು ಸಲ್ಲಿಸುತ್ತಿದ್ದರು. ಅವರಿಗೆ ನಮ್ಮಾಳ್ವಾರರೇ ತಮ್ಮ ಗುರಿ ಮತ್ತು ಗುರಿಸಾಧನೆಯ ಪ್ರಕ್ರಿಯೆಯಾಗಿದ್ದರು. ಇದನ್ನೇ ಮಧುರಕವಿ ಆಳ್ವಾರರು ತಮ್ಮ ದಿವ್ಯ ಪ್ರಬಂಧದಲ್ಲಿ ಸ್ಥಾಪಿಸಿದ್ದಾರೆ.

ಪಿಳ್ಳೈಲೋಕಾಚಾರ್ಯರು  ತಮ್ಮ ಮೇರು ಕೃತಿಯಾದ ಶ್ರೀವಚನ ಭೂಷಣದ ಕಡೆಯ ಪ್ರಕರಣದಲ್ಲಿ ಆಚಾರ್ಯ ಅಭಿಮಾನ ನಿಷ್ಥೆಯ ವೈಭವಗಳನ್ನು ಪೂರ್ಣವಾಗಿ ತೆರೆದಿಟ್ಟು, ಮಧುರಕವಿ ಆಳ್ವಾರರ ಜೀವನ ಮತ್ತು ನಮ್ಮಾಳ್ವಾರರಿಗೆ ಅವರ ನಂಟನ್ನು ಉದಾಹರಿಸುತ್ತಾ ಈ ತತ್ತ್ವವನ್ನು ಪ್ರತಿಪಾದಿಸಿದ್ದಾರೆ. 8 ನೆಯ ಪ್ರಕರಣದಲ್ಲಿ ಭಗವಂತನ ನಿರ್ಹೇತುಕ ಕೃಪೆ ಯನ್ನು ವಿವರಿಸಿದ್ದಾರೆ. ಅದೇ ಸಮಯದಲ್ಲಿ ಭಗವಂತನು ಜೀವಾತ್ಮರಿಗೆ ಅವರ ಕರ್ಮಫಲವನ್ನು ಕೊಡುವುದಕ್ಕೂ ಸಹ ಬಧ್ಧನಾಗಿದ್ದಾನೆ. ಅಂತೆಯೇ ಒಬ್ಬೊಬ್ಬರಿಗೆ ಭಗವಾನ್ ತನ್ನನ್ನು ಸ್ವೀಕರಿಸುತ್ತಾನೋ ಇಲ್ಲವೋ ಎಂಬ ಸಂದೇಹ ಬರಬಹುದು. 9 ನೆಯ(ಕಡೆಯ) ಪ್ರಕರಣದಲ್ಲಿ ಪಿಳ್ಳೈಲೋಕಾಚಾರ್ಯರು ಚರಮ ಉಪಾಯದ ಹಿರಿಮೆಯನ್ನು ಸ್ಥಾಪಿಸಿದ್ದಾರೆ; ಅoದರೆ ಆಚಾರ್ಯರ ಮೇಲೆ ಅವಲಂಬಿತರಾಗಿರುವುದು ಮತ್ತು ಅದು ಹೇಗೆ ಜೀವಾತ್ಮನನ್ನು ವಿಮೋಚಿತಗೊಳಿಸುತ್ತದೆ ಎಂದು. ಈಗ ಅದನ್ನು ನೋಡೋಣ.

ಸೂತ್ರ 407ರಲ್ಲಿ ಹೀಗೆ ತೋರಿಸಿದೆ: ಎಂಬೆರುಮಾನ್(ಭಗವಾನ್) ಸ್ವತಂತ್ರನಾದ್ದರಿಂದ ಶಾಸ್ತ್ರವನ್ನು(ಒಬ್ಬರ ಕರ್ಮ ಆಧರಿಸಿ ಫಲ ನೀಡುವುದು) ಅನುಸರಿಸಿ ತನ್ನನ್ನು ತಿರಸ್ಕರಿಸಬಹುದು ಅಥವಾ ಕಾರುಣ್ಯದಿಂದ ತನ್ನನ್ನು ಸ್ವೀಕರಿಸಬಹುದು ಎಂದು ಒಬ್ಬೊಬ್ಬರಿಗೆ ಸಂದೇಹ ಬರಬಹುದು. ಮಾಮುನಿಗಳು ತಮ್ಮ ವ್ಯಾಖ್ಯಾನದಲ್ಲಿ ಹೀಗೆ ಸೇರಿಸುವುದರ ಮೂಲಕ ಸೂತ್ರವು ಪೂರ್ಣಗೊಳ್ಳುತ್ತದೆ ಎಂದು ತೋರಿಸಿದ್ದಾರೆ “ನಾವು ಪರತಂತ್ರರಾದ ಆಚಾರ್ಯರ(ಎಂಬೆರುಮಾನ್ ಮೇಲೇ ಪೂರ್ಣ ಅವಲಂಬಿತರಾಗಿರುವ) ಮೇಲೆ ಅವಲಂಬಿತರಾದರೆ ಸಂದೇಹವೇ ಬೇಡ, ಅವರು ಖಚಿತವಾಗಿ ನಮ್ಮನ್ನು ವಿಮೋಚಿತಗೊಳಿಸುತ್ತಾರೆ , ಏಕೆಂದರೆ ಆಚಾರ್ಯರು ಕಾರುಣ್ಯದ ಸಾಕಾರ ಮತ್ತು ಜೀವಾತ್ಮನ ಏಳಿಗೆಯನ್ನು ಮಾತ್ರ ನೋಡುತ್ತಾರೆ.

ಸೂತ್ರ 408ರಲ್ಲಿ ಹೀಗೆ ವಿವರಿಸಿದೆ: ಇದನ್ನು 10 ಆಳ್ವಾರುಗಳ ಪಾಶುರಗಳಿಂದ ಸಾಬೀತುಪಡಿಸಲಾಗದು(ಮಧುರಕವಿ ಆಳ್ವಾರ್ ಮತ್ತು ಆಂಡಾಳ್ ಹೊರತುಪಡಿಸಿ), ಏಕೆಂದರೆ ಅವರು ಪೂರ್ಣವಾಗಿ ಎಂಬೆರುಮಾನ್(ಭಗವಾನ್)ಗೆ ಶರಣಾಗತರಾದವರು. ಈ ಆಳ್ವಾರುಗಳು ಎಂಬೆರುಮಾನನ ದೈವಿಕ ಆಶೀರ್ವಾದದಿಂದ ನಿಷ್ಕಳಂಕ ಜ್ನಾನ ಪಡೆದವರು. ಆವರು ಭಗವದನುಭವದಲ್ಲಿ ತಲ್ಲೀನರಾಗಿರುವಾಗ ಭಾಗವತರನ್ನು ವೈಭವೀಕರಿಸುತ್ತಾರೆ. ಆದರೆ ಅವರು ಎಂಬೆರುಮಾನ್ ನಿಂದ ಪ್ರತ್ಯೇಕಗೊಂಡಾಗ  ಭಾಗವತರ ಮೇಲೆ ಅಸಮಾಧಾನಗೊಳ್ಳುತ್ತಾರೆ(ಮಾಮುನಿಗಳು ತಮ್ಮ ವ್ಯಾಖ್ಯಾನದಲ್ಲಿ ಅನೇಕ ಪಾಶುರಗಳನ್ನು ಉಲ್ಲೇಖಿಸಿದ್ದಾರೆ). ಮಾಮುನಿಗಳು ಸಂಕ್ಷೇಪವಾಗಿ ನಾವು ನಿಜವಾದ ಆಚಾರ್ಯ ವೈಭವಗಳನ್ನು 10 ಆಳ್ವಾರುಗಳ ಪಾಶುರಗಳ ಮೂಲಕ ನಿರ್ಧರಿಸಲಾಗದು, ಆದರೆ ನಾವು ಅದನ್ನು ಮಧುರಕವಿ ಆಳ್ವಾರರ ಪಾಶುರಗಳಿಂದ ಮಾಡಬಹುದು ಎಂದಿದ್ದಾರೆ.

ಸೂತ್ರ 409ರಲ್ಲಿ ಹೀಗೆ ವಿವರಿಸಿದೆ: ಮಧುರಕವಿ ಆಳ್ವಾರರು ಇತರ ಆಳ್ವಾರರಿಗಿಂತ ಅತಿ ಶ್ರೇಷ್ಠರು ಏಕೆಂದರೆ ಅವರು ತಮ್ಮ ಗಮನವನ್ನು ಆಚಾರ್ಯ(ನಮ್ಮಾಳ್ವಾರ್) ವೈಭವದ ಮೇಲೆ ಮಾತ್ರ ಕೇಂದ್ರೀಕರಿಸಿದ್ದಾರೆ, ಇತರ ಆಳ್ವಾರರಂತೆ ಭಾಗವತರನ್ನು ಕೆಲವೊಮ್ಮೆ ವೈಭವೀಕರಿಸಿ ಮತ್ತೆ ಕೆಲವೊಮ್ಮೆ ನಿರ್ಲಕ್ಷಿಸುವುದಿಲ್ಲ. ಮಧುರಕವಿ ಆಳ್ವಾರರ ನುಡಿಗಳ ಮೂಲಕ ನಾವು ಆಚಾರ್ಯ ವೈಭವಗಳನ್ನು ಸ್ಥಾಪಿಸಬಹುದು.

ಮಾಮುನಿಗಳು ಮಧುರಕವಿ ಆಳ್ವಾರರ ವೈಭವಗಳನ್ನು ತಮ್ಮ ಉಪದೇಶ ರತ್ನಮಾಲೆಯ 25ನೇ ಮತ್ತು 26ನೇ ಪಾಶುರಗಳಲ್ಲಿ ವಿವರಿಸಿದ್ದಾರೆ.

25ನೆಯ ಪಾಶುರದಲ್ಲಿ ಅವರು ಹೇಳಿರುವುದೇನೆಂದರೆ ಮಧುರಕವಿ ಆಳ್ವಾರರ ತಿರುಅವತಾರ(ಉದಯ) ದಿನ – ಚಿತ್ತಿರೈ/ಚಿತ್ತಿರೈ,ಇತರ ಆಳ್ವಾರರುಗಳ ಅವತಾರ ದಿನಗಳಿಗಿಂತ ಮಿಗಿಲಾಗಿ, ಒಬ್ಬ ಪ್ರಪನ್ನನ ಸ್ವರೂಪಕ್ಕೆ ಬಹು ಸೂಕ್ತವಾದದ್ದು.

26ನೆಯ ಪಾಶುರದಲ್ಲಿ ಅವರು ಮಧುರಕವಿ ಆಳ್ವಾರರ್ ಮತ್ತು ಅವರ ಪ್ರಬಂಧದ ವೈಭವಗಳನ್ನು ಅತ್ಯದ್ಭುತವಾಗಿ ವಿವರಿಸಿದ್ದಾರೆ.

ವಾಯ್ತ ತಿರುಮಣ್ತಿರತ್ತಿನ್ ಮತ್ತಿಮಮಾಮ್ ಪದಮ್ ಪೋಲ್
ಚೀರ್ತ್ತ ಮಧುರಕವಿ ಚೆಯ್ ಕಲೈಯೈ
ಆರ್ತ್ತ ಪುಗಳ್ ಆರಿಯರ್ಗಳ್ ತಾಙ್ಗಳ್ ಅರುಳಿಚೆಯಲ್ ನಡುವೇ
ಚೇರ್ವಿತ್ತಾರ್ ತಾತ್ಪರಿಯಮ್ ತೇರ್ನ್ತು

ಪಿಳ್ಳೈಲೋಕಮ್ ಜೀಯರ್ ಈ ಪಾಶುರಕ್ಕೆ ಸುಂದರವಾದ ವಿವರಣೆಯನ್ನು ನೀಡುತ್ತಾರೆ. ತಿರುಮಂತ್ರದಲ್ಲಿ ನಮ: ಪದವನ್ನು ಇಲ್ಲಿ ಕಣ್ಣಿನುಣ್ ಚಿರುತ್ತಾಮ್ಬುಗೆ ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ. ತಿರುಮಂತ್ರವು ತನ್ನ ವಾಚಕರಿಗೆ ಈ ಸಂಸಾರಬಂಧನದಿಂದ ಮುಕ್ತಗೊಳಿಸುವುದೆಂದು ವೈಭವೀಕರಿಸಲ್ಪಟ್ಟಿದೆ. ಈ ತಿರುಮಂತ್ರದಲ್ಲಿ ನಮ: ಪದವು ಬಹು ಮುಖ್ಯವಾದ ಪದ – ಅದು ನಮ್ಮನ್ನು ರಕ್ಷಿಸಿಕೊಳ್ಳುವದರಲ್ಲಿ ನಾವು ಭಾಗಿಗಳಲ್ಲ ಮತ್ತು ನಾವು ನಮ್ಮ ರಕ್ಷಣೆಗಾಗಿ ನಮ್ಮ ಒಡೆಯ(ಎoಬೆರುಮಾನ್)ನನ್ನು ಸಂಪೂರ್ಣವಾಗಿ ಅವಲಂಬಿಸಬೇಕು ಎಂದು ಸ್ಪಷ್ಟವಾಗಿ ಪ್ರತಿಪಾದಿಸುತ್ತದೆ. ಇದೇ ತತ್ವವನ್ನು ಮಧುರಕವಿ ಆಳ್ವಾರರರು (ಏಕೆಂದರೆ ತಮ್ಮ ಆಚಾರ್ಯ ನಿಷ್ಠೆಯಿಂದಾಗಿ ಅವರೇ ಶ್ರೇಷ್ಠರಾಗಿದ್ದಾರೆ) ತಮ್ಮ ಪ್ರಬಂಧದಲ್ಲಿ ನಾವು ನಮ್ಮ ರಕ್ಷಣೆಗಾಗಿ ನಮ್ಮ ಆಚಾರ್ಯರನ್ನು ಸಂಪೂರ್ಣವಾಗಿ ಅವಲಂಬಿಸಬೇಕು ಎಂದು ವಿವರಿಸಿದ್ದಾರೆ. ಆದ್ದರಿಂದ ಅದು ವಾಸ್ತವವಾಗಿ ಶಾಸ್ತ್ರಗಳ ಸಾರವನ್ನು ತೆರೆದಿಡುವುದರಿಂದ, ನಮ್ಮ ಪೂರ್ವಾಚಾರ್ಯರು ಈ ಪ್ರಬಂಧವನ್ನು 4000 ದಿವ್ಯ ಪ್ರಬಂಧಗಳ ಸಂಗ್ರಹದಲ್ಲಿ ಸೇರಿಸಿದ್ದಾರೆ. ಮಧುರಕವಿ ಆಳ್ವಾರರು 27 ನಕ್ಷತ್ರಗಳ ಮಧ್ಯೆ ಬರುವ ಚಿತ್ತಿರೈ ನಕ್ಷತ್ರದಲ್ಲಿ ಜನಿಸಿದ ಹಾಗೆ, ಅವರ ಪ್ರಬಂಧವು ಕೂಡ ದಿವ್ಯ ಪ್ರಬಂಧ ರತ್ನಹಾರದ ಕೇಂದ್ರ ಅಂಶವೆಂದು ಪರಿಗಣಿಸಲ್ಪಟ್ಟಿದೆ.

ಹೀಗೆ, ಎಂಬೆರುಮಾನಾರ್, ನಂಪಿಳ್ಳೈ, ಪಿಳ್ಳೈ ಲೋಕಾಚಾರ್ಯರು, ಮಾಮುನಿಗಳು ಮತ್ತು ಪಿಳ್ಳೈಲೋಕಮ್ ಜೀಯರ್ ಅವರುಗಳು ಹೇಗೆ ಒಂದೇ ತತ್ತ್ವವನ್ನು ವಿವಿಧ ಕೋನಗಳಿಂದ ಸುಂದರವಾಗಿ ವರ್ಣಿಸಿದ್ದಾರೆ ಎಂದು ನಾವು ನೋಡಬಹುದು.

ಈ ಅರಿವಿನಿಂದ ಈಗ ನಾವು ಅವರ ಚರಿತ್ರೆಯನ್ನು ತಿಳಿದುಕೊಳ್ಳೋಣ.

ಮಧುರಕವಿ ಆಳ್ವಾರ್ ಚೈತ್ರ ಮಾಸ, ಚಿತ್ರಾ ನಕ್ಷತ್ರದಲ್ಲಿ ತಿರುಕ್ಕೋಳೂರ್ ನಲ್ಲಿ ಜನಿಸಿದರು. ಹೇಗೆ ಸೂರ್ಯನ ಕಿರಣಗಳು ಸ್ವತ: ಸೂರ್ಯನಿಗಿಂತ ಮೊದಲೇ ಕಾಣಿಸಿಕೊಳ್ಳುವವೋ, ಹಾಗೆ ಅವರು ನಮ್ಮಾಳ್ವಾರರ ದೈವಿಕ ಉದಯಕ್ಕೆ ಕೆಲವು ಕಾಲ ಮೊದಲು ಜನಿಸಿದರು. ಅವರ ಶ್ರೇಷ್ಠತೆಯನ್ನು ಕಂಡು, ದಿವ್ಯಸೂರಿ ಚರಿತೆಯಲ್ಲಿ, ಗರುಡವಾಹನ ಪಂಡಿತರು ಅವರನ್ನು “ಕುಮುದ ಗಣೇಶರ” ಅಥವಾ “ಗರುಡಾಳ್ವಾರರ” ಒಂದು ಅಂಶವೆಂದು ವೈಭವೀಕರಿಸಿದ್ದಾರೆ (ಆಳ್ವಾರುಗಳು ಎಂಬೆರುಮಾನ್ ನಿಂದ ಈ ಸಂಸಾರದಿಂದ ಆರಿಸಲ್ಪಟ್ಟು ದೈವಿಕವಾಗಿ ಆಶೀರ್ವದಿಸಲ್ಪಟ್ಟಿದ್ದರು).

ಅವರು ಸಾಮವೇದದ ಅಂಗವಾದ ಪೂರ್ವಶಿಖಾ ಬ್ರಾಹ್ಮಣರ ಒಂದು ಕುಟುಂಬದಲ್ಲಿ ಜನಿಸಿದರು. ಸೂಕ್ತ ವಯಸ್ಸಿನಲ್ಲಿ ಅವರಿಗೆ ಜಾತಕರ್ಮ, ನಾಮಕರಣ, ಅನ್ನಪ್ರಾಶನ, ಚೌಳ, ಉಪನಯನ, ಇತ್ಯಾದಿಗಳು ನಡೆದವು, ಮತ್ತು ಅವರು ವೇದ, ವೇದಾಂತ, ಪುರಾಣ, ಇತಿಹಾಸ, ಇತ್ಯಾದಿಗಳನ್ನು ಅಭ್ಯಸಿಸಿದರು. ಅವರು ಎಂಬೆರುಮಾನ್ ನನ್ನು ಬಿಟ್ಟು ಇತರ ಎಲ್ಲದರಿಂದ ಬೇರೆಯಾಗಿದ್ದರು ಮತ್ತು ಅಯೋಧ್ಯಾ, ಮಥುರಾ, ಇತ್ಯಾದಿ ಉತ್ತರಭಾರತದ ದಿವ್ಯದೇಶ/ಕ್ಷೇತ್ರಗಳಲ್ಲಿ ತೀರ್ಥಯಾತ್ರೆ ಕೈಗೊಂಡರು.

MadhuraKavi Azhwar2ಮಧುರಕವಿ ಆಳ್ವಾರ್, ನಮ್ಮಾಳ್ಹ್ವಾರ್ ಮತ್ತು ನಾಥಮುನಿಗಳು – ಕಾಂಚೀಪುರಮ್

ಮಧುರಕವಿ ಆಳ್ವಾರರ ನಂತರ ಜನಿಸಿದ ನಮ್ಮಾಳ್ವಾರರು, ತಾಯಿಯ ಹಾಲನ್ನು ಕುಡಿಯಲೂ ಸಹ ಆಸಕ್ತಿಯಿಲ್ಲದೆ ಮತ್ತು ಯಾವ ಮಾತನ್ನೂ ಆಡದೆ (ಸಂಪೂರ್ಣ ಮೌನವಾಗಿ) ಉಳಿದಿದ್ದರು. ಅವರ ತಂದೆ ತಾಯಿಗಳಾದ ಕಾರಿ ಮತ್ತು ಉದಯನಂಗೈ, ಅವರ ಜನನದ 12ನೆಯ ದಿನ, ಮಗುವಿನ ವರ್ತನೆಯಿಂದ ಬಹು ಆತಂಕಗೊಂಡು, ತಾಮ್ರಭರಣಿ ನದಿಯ ದಕ್ಷಿಣ ದಿಕ್ಕಿಗೆ ಇರುವ, ಸುಂದರವಾಗಿ ಶಂಖ ಮತ್ತು ಚಕ್ರಗಳಿಂದ ಅಲಂಕೃತನಾದ,  ಕಮಲದಂತೆ ಸುಂದರವಾದ ನೇತ್ರಗಳುಳ್ಳವನಾದ, ಅಭಯ ಹಸ್ತವನ್ನು ಹಿಡಿದ, ಮತ್ತು ದಿವ್ಯಮಹಿಷಿಗಳಾದ ಶ್ರೀದೇವಿ, ಭೂದೇವಿ ಮತ್ತು ನೀಳಾದೇವಿ ಸಮೇತನಾದ, ತನ್ನ ಸುಂದರವಾದ ದೇವಸ್ಥಾನದಲ್ಲಿರುವ, ಪೊಲಿನ್ದು ನಿಣ್ರ ಪಿರಾನ್ ಎಂಬೆರುಮಾನನ ಮುಂದೆ ಕರೆದುಕೊಂಡು ಹೋದರು. ಎಂಬೆರುಮಾನನ ಮುಂದೆ ಆ ಮಗುವಿಗೆ ಮಾರನ್ (ಇತರರಿಗಿಂತ ಭಿನ್ನವಾದವನು) ಎಂದು ಹೆಸರಿಟ್ಟರು ಮತ್ತು ಆ ಮಗುವನ್ನು ದಿವ್ಯವಾದ ಹುಣಿಸೇಮರದ ಕೆಳಗೆ ಬಿಟ್ಟರು ಮತ್ತು ಆತನನ್ನು ಒಂದು ದಿವ್ಯವಾದ ವ್ಯಕ್ತಿತ್ವವುಳ್ಳವನಾಗಿ ಪರಿಗಣಿಸಿ ಅಲ್ಲಿ ಪೂಜಿಸಿದರು. ಪರಮಪದನಾಥನು ನಂತರ ವಿಶ್ವಕ್ಸೇನರಿಗೆ ಹೋಗಿ ನಮ್ಮಾಳ್ವಾರರಿಗೆ ಪಂಚಸಂಸ್ಕಾರ ಮಾಡಲು ಮತ್ತು ದ್ರಾವಿಡ ವೇದವನ್ನು ಮತ್ತು ಎಲ್ಲ ರಹಸ್ಯ ಮಂತ್ರಗಳು/ಅರ್ಥಗಳನ್ನು ಉಪದೇಶಿಸಲು ಆದೇಶಿಸುತ್ತಾನೆ (ಇದರಿಂದ ನಾವು ನಾಯನಾರ್ ಅವರು ‘ಆಚಾರ್ಯ ಹೃದಯಂ’ ನಲ್ಲಿ ಸ್ಪಷ್ಟಪಡಿಸಿರುವ ಹಾಗೆ ದ್ರಾವಿಡ ವೇದವೂ ಕೂಡ ಸನಾತನವಾದದ್ದೆಂದು ಅರಿಯಬಹುದು) ಮತ್ತು ವಿಶ್ವಕ್ಸೇನರು ಹಾಗೆಯೇ ಸಹಕರಿಸಿದರು.

ನಮ್ಮಾಳ್ವಾರರು ನಂತರ 16 ವರ್ಷಗಳ ಕಾಲ ತಿರುಪ್ಪುಳಿಯಾಳ್ವಾರ್(ದಿವ್ಯ ಹುಣಿಸೆಮರ)ದ ಅಡಿಯಲ್ಲಿ ನೆಲೆಸಿದರು. ಅವರ ತಂದೆತಾಯಿಗಳು ಅವರ ಹಿರಿಮೆಯನ್ನು ಅರಿತರು ಆದರೆ ಇತರರೊಂದಿಗೆ ಹಂಚಿಕೊಳ್ಳಲಿಲ್ಲ ಏಕೆಂದರೆ ಅನೇಕರು ಆಳ್ವಾರರ ಹಿರಿಮೆಯನ್ನು ಅರಿಯಲಿಲ್ಲ. ಆಳ್ವಾರರು ತಿರುಕ್ಕುರುಂಗುಡಿ ನಂಬಿ ಎoಬೆರುಮಾನನ್ನು ಧ್ಯಾನಿಸಿಕೊಂಡಿದ್ದರು. ಮಧುರಕವಿ ಆಳ್ವಾರರೂ ಸಹ ಅವರ ಹಿರಿಮೆಯನ್ನು ಕೇಳಿದ್ದರು ಮತ್ತು ಒಂದು ರಾತ್ರಿ ಅವರು ನದೀತೀರಕ್ಕೆ ಹೋಗಿದ್ದಾಗ ದಕ್ಷಿಣ ದಿಕ್ಕಿನಿಂದ ಒಂದು ಪ್ರಕಾಶಮಾನವಾದ ಬೆಳಕು ಹೊಮ್ಮುವುದನ್ನು ನೋಡಿದರು. ಅವರು ಮೊದಲು ಅದು ಒಂದು ಗ್ರಾಮವು ಉರಿಯುತ್ತಿರಬಹುದು ಅಥವಾ ಕಾಡುಕಿಚ್ಚು ಇರಬಹುದೆಂದು ಭಾವಿಸಿದರು.

ಆದರೆ, ತರುವಾಯ ಅವರು ಇನ್ನೂ 2-3 ರಾತ್ರಿಗಳು ನಿರಂತರವಾಗಿ ಅದೇ ತೇಜಸ್ಸನ್ನು ಗಮನಿಸಿದರು. ಅವರು ಅದು ಏನೆಂದು ಪರೀಕ್ಷಿಸಲು ನಿರ್ಧರಿಸಿದರು, ಮತ್ತು ಪ್ರಾತ:ಕಾಲ ನಿದ್ರಿಸಿ ಮತ್ತು ರಾತ್ರಿಯ ವೇಳೆ ಆ ತೇಜಸ್ಸನ್ನು ಹಿಂಬಾಲಿಸುತ್ತಾ ಹೋದರು. ದಾರಿಯಲ್ಲಿ ಅವರು ಅನೇಕ ದಿವ್ಯದೇಶಗಳನ್ನು ಪರಿಶೀಲಿಸಿದರು ಮತ್ತು ಶ್ರೀರಂಗವನ್ನು ತಲುಪಿದರು. ಅವರು ಇನ್ನೂ ಆ ತೇಜಸ್ಸು ಮತ್ತಷ್ಟು ದಕ್ಷಿಣದಲ್ಲಿ ಕಂಡರು ಮತ್ತು ಕಡೆಯದಾಗಿ ತಿರುಕ್ಕುರುಗೂರ್(ಆಳ್ವಾರ್ ತಿರುನಗರಿ) ತಲುಪಿದರು. ಇನ್ನು ಮುಂದೆ ಆ ತೇಜಸ್ಸು ಕಾಣದಾಗಿ ಅವರು ಅದು ಇಲ್ಲಿಂದಲೇ ಹುಟ್ಟಿರಬೇಕೆಂದು ತೀರ್ಮಾನಿಸಿದರು. ಆವರು ನಂತರ ದೇವಸ್ಥಾನವನ್ನು ಪ್ರವೇಶಿಸಿದರು ಮತ್ತು ತಿರುಪ್ಪುಳಿಯಾಳ್ವಾರ್(ಹುಣಿಸೆಮರ) ಕೆಳಗೆ ಸಂಪೂರ್ಣವಾದ/ಶುದ್ಧವಾದ ಜ್ಞಾನದಿಂದ ತುಂಬಿದ, ಸುಂದರವಾದ ನೇತ್ರಗಳುಳ್ಳ, ಕೇವಲ 16 ವರ್ಷದ ಯುವಕನಾದ ಮತ್ತು ಹುಣ್ಣಿಮೆಯ ಚಂದ್ರನಂತೆ ಸುಂದರನಾದ, ಪದ್ಮಾಸನದಲ್ಲಿ ಕುಳಿತಿರುವ, ಉಪದೇಶಮುದ್ರೆಯಲ್ಲಿ  ಎoಬೆರುಮಾನ್ ಬಗ್ಗೆ ಬೋಧಿಸುತ್ತಿರುವ ಮತ್ತು ಎಲ್ಲ ಪ್ರಪನ್ನರಿಗೂ ಆಚಾರ್ಯನಾದ ನಮ್ಮಾಳ್ವಾರರನ್ನು ಕಂಡರು. ಅವರು ಭಗವದನುಭವದಲ್ಲಿ ಮಗ್ನರಾಗಿರುವುದನ್ನು ಗಮನಿಸಿ, ಅವರು ಒಂದು ಕಲ್ಲನ್ನು ಎತ್ತಿಕೊಳ್ಳೂತ್ತಾರೆ ಮತ್ತು ಅವರ ಮುಂದೆ ಎಸೆಯುತ್ತಾರೆ. ಆಳ್ವಾರರು ಎಚ್ಚರಗೊಳ್ಳುತ್ತಾರೆ ಮತ್ತು ಮಧುರಕವಿ ಆಳ್ವಾರರನ್ನು ನೋಡುತ್ತಾರೆ. ಅವರು ಮಾತನಾಡುತ್ತಾರೆಯೋ ಎಂದು ಪರೀಕ್ಷಿಸಬೇಕೆಂದೆನಿಸಿ, ಮಧುರಕವಿ ಆಳ್ವಾರರು ಅವರನ್ನು ಕೇಳುತ್ತಾರೆ “ಚೆತ್ತತ್ತಿನ್ ವಯಿಟ್ರಿಲ್ ಚಿರಿಯದು ಪಿರನ್ದಾಲ್ ಎತ್ತೈತ್ತಿನ್ರು ಎಙ್ಗೇ ಕಿಡಕ್ಕುಮ್” ಎಂದರೆ “ಒಂದು ಚೇತನನು(ಜೀವಾತ್ಮಾ) ಒಂದು ಅಚೇತನವನ್ನು ಪ್ರವೇಶಿಸಿದರೆ, ಅವನು ಏನನ್ನು ಭೋಗಿಸುತ್ತಾನೆ ಮತ್ತು ಎಲ್ಲಿ ವಾಸಿಸುತ್ತಾನೆ?” ಅದಕ್ಕೆ ಆಳ್ವಾರರು ಉತ್ತರಿಸುತ್ತಾರೆ “ಅತ್ತೈತ್ತಿನ್ರು ಅಙ್ಗೇ ಕಿಡಕ್ಕುಮ್”  ಎಂದರೆ “ಆತನು ಭೌತಿಕ ಸುಖ ದು:ಖಗಳನ್ನು ಅನುಭವಿಸುತ್ತಿರುತ್ತಾನೆ ಮತ್ತು ಶಾಶ್ವತವಾಗಿ ಅಲ್ಲಿಯೇ ನೆಲೆಸುತ್ತಾನೆ”. ಇದನ್ನು ಕೇಳಿದ ಮಧುರಕವಿ ಆಳ್ವಾರರು ಅರಿತುಕೊಳ್ಳುತ್ತಾರೆ “ಇವರು ಒಬ್ಬ ಸರ್ವಜ್ಞರು(ಎಲ್ಲವನ್ನು ತಿಳಿದವರು) ಮತ್ತು ನಾನು ಈ ಮಹಾನ್ ವ್ಯಕ್ತಿಯ ಸೇವೆ ಮಾಡಬೇಕು ಮತ್ತು ಉದ್ಧರಿಸಲ್ಪಡಬೇಕು” ಮತ್ತು ನಮ್ಮಾಳ್ವಾರರ ಚರಣಾರವಿಂದದಲ್ಲಿ ಅಡ್ಡಬೀಳುತ್ತಾರೆ. ಅವರು ಆನಂತರ ಆಳ್ವಾರರರೊಂದಿಗೆ ನೆಲೆಸುತ್ತಾರೆ, ಅವರಿಗೆ ನಿರಂತರ ಸೇವೆ ಸಲ್ಲಿಸುತ್ತಾರೆ ಮತ್ತು ಅವರ ಮಹಿಮೆಗಳ ಗುಣಗಾನ ಮಾಡುತ್ತಾರೆ.

ತರುವಾಯ, ಎಲ್ಲ ಕಾರಣಗಳಿಗೂ ಕಾರಣಕರ್ತನಾದ, ಎಲ್ಲದಕ್ಕೂ ಒಡೆಯನಾದ, ಎಲ್ಲರಿಗೂ ನಿಯಂತ್ರಕನಾದ, ಎಲ್ಲರಿಗೂ ಮತ್ತು ಎಲ್ಲದಕ್ಕೂ ಅಂತರ್ಯಾಮಿ ಪರಮಾತ್ಮನಾದ, ಸುಂದರವಾದ ಕಪ್ಪು/ನೀಲ ತಿರುಮೇನಿ(ಕಾಯ) ಉಳ್ಳವನಾದ, ಶ್ರೀವೈಕುಂಠನಾಥನು(ಪಮಪದನಾಥನು) ಆಳ್ವಾರರನ್ನು ಸಂಧಿಸಲು ಬಯಸುತ್ತಾನೆ.  ಪೆರಿಯ ತಿರುವಡಿ (ಗರುಡಾಳ್ವಾನ್) ಒಡನೆಯೇ  ಎoಬೆರುಮಾನ್ ಮುಂದೆ ಆಗಮಿಸುತ್ತಾನೆ ಮತ್ತು ಎoಬೆರುಮಾನ್ಎ  ಶ್ರೀ ಮಹಾಲಕ್ಷ್ಮಿ ಸಮೇತ ಅವನ ಮೇಲೇರಿ ಅವರು ಕ್ಷಣದಲ್ಲೇ ತಿರುಕ್ಕುರುಗೂರ್ ತಲುಪುತ್ತಾರೆ ಮತ್ತು ಎoಬೆರುಮಾನ್ ನಮ್ಮಾಳ್ವಾರರಿಗೆ ತನ್ನ ದಿವ್ಯದರ್ಶನವನ್ನು ನೀಡುತ್ತಾನೆ ಮತ್ತು ಅವರಿಗೆ ದಿವ್ಯ ನಿಷ್ಕಳಂಕ ಜ್ಞಾನವನ್ನು ಆಶೀರ್ವದಿಸುತ್ತಾನೆ.  ಎoಬೆರುಮಾನ್ ನಿಂದ ಹೀಗೆ ಆಶೀರ್ವದಿಸಲ್ಪಟ್ಟ ನಮ್ಮಾಳ್ವಾರರು ಭಗವದನುಭವದಲ್ಲಿ ತಲ್ಲೀನರಾಗುತ್ತಾರೆ ಮತ್ತು ಆ ಅನುಭವವು ಮಿತಿಮೀರಿ ಉಕ್ಕಿ ಹರಿಯುವುದರಿಂದ, ಅದು ದಿವ್ಯ ಪಾಶುರಗಳಾದ ತಿರುವಿರುತ್ತಮ್, ತಿರುವಾಸಿರಿಯಮ್, ಪೆರಿಯ ತಿರುವನ್ದಾದಿ ಮತ್ತು ತಿರುವಾಯ್ಮೊಳಿ (4 ವೇದಗಳ ಸಾರ) ರೂಪವಾಗಿ ಹರಿದು ಎoಬೆರುಮಾನ್ ನ ದಿವ್ಯ ಸ್ವರೂಪ, ದಿವ್ಯ ರೂಪ, ದಿವ್ಯ ಗುಣಗಳನ್ನು ಪ್ರಕಟಗೊಳಿಸುತ್ತವೆ. ನಂತರ ನಮ್ಮಾಳ್ವಾರ್ ಅದೇ ಜ್ಞಾನನ್ನು ಮಧುರಕವಿ ಆಳ್ವಾರ್ ಮತ್ತು ಇತರ ಶರಣಾಗತರಿಗೆ ಉಪದೇಶಿಸುತ್ತಾರೆ.ಎಲ್ಲ ದಿವ್ಯದೇಶ ಎoಬೆರುಮಾನ್ ನಮ್ಮಾಳ್ವಾರರನ್ನು ಆಶೀರ್ವದಿಸಲು ತಿರುಪ್ಪುಳಿಯಾಳ್ವಾರ್ ಗೆ ಆಗಮಿಸುತ್ತಾರೆ ಮತ್ತು ನಮ್ಮಾಳ್ವಾರರ ಮಂಗಳಾಶಾಸನದಿಂದ ಪುಷ್ಟಿಗೊಳ್ಳುತ್ತಾರೆ. ನಂತರ ನಮ್ಮಾಳ್ವಾರರು ಪ್ರತಿಯೊಬ್ಬರೂ ತಮ್ಮಂತೆ ಆಗಬೇಕೆಂದು,  ತಮ್ಮಂತೆ ಎoಬೆರುಮಾನ್ ನ ಜೊತೆ ಬಾಂಧವ್ಯವನ್ನು ಬೆಳೆಸಿಕೊಳ್ಳಲೆಂದು ಹರಸುತ್ತಾರೆ, ಮತ್ತು ನಿತ್ಯಸೂರಿಗಳು (ಪರಮಪದದಿಂದ) ಮತ್ತು ಶ್ವೇತದ್ವೀಪವಾಸಿಗಳು (ಕ್ಷೀರಾಬ್ಧಿ ನಿವಾಸಿಗಳು) ನಮ್ಮಾಳ್ವಾರರನ್ನು ಶ್ಲಾಘಿಸಲು ಆಗಮಿಸುತ್ತಾರೆ ಮತ್ತು ನಮ್ಮಾಳ್ವಾರರು ಅವರನ್ನು ಕಂಡ ನಂತರ ಅವರಿಗೆ ಮಂಗಳಾಶಾಸನವನ್ನು ಮಾಡುತ್ತಾರೆ. ನಿತ್ಯಸೂರಿಗಳು ಮತ್ತು ಶ್ವೇತದ್ವೀಪವಾಸಿಗಳ ವೈಭವದಿಂದ ಮತ್ತು ಅವರು ತಮ್ಮನ್ನು ಕಾಣಲು ಬಂದದ್ದರಿಂದ ಪರವಶಗೊಂಡ ನಮ್ಮಾಳ್ವಾರರು ತಮ್ಮನ್ನು ಈ ಬ್ರಹ್ಮಾಂಡದ ಅತಿ ಶ್ರೇಷ್ಠರೆಂದು ಘೋಷಿಸಿಕೊಳ್ಳುತ್ತಾರೆ (ಎoಬೆರುಮಾನ್ನ ದಿವ್ಯ ಆಶೀರ್ವಾದಗಳಿಂದ ಉದ್ಭವವಾದ ಸಾತ್ವಿಕ ಅಹಂಕಾರದಿಂದಾಗಿ), ಅಪರಿಮಿತವಾದ ಮಹಿಮೆಗಳೊಂದಿಗೆ ಜೀವಿಸುತ್ತಾರೆ, ಕಣ್ಣನ್ ಎoಬೆರುಮಾನ್ನ  ನಿರಂತರ ಚಿಂತನೆಯಿಂದ ತಮ್ಮನ್ನು ಪೋಷಿಸಿಕೊಳ್ಳುತ್ತಾರೆ. ಅವರು ಅರ್ಥಪಂಚಕವನ್ನು (ಪರಮಾತ್ಮ ಸ್ವರೂಪ, ಜೀವಾತ್ಮ ಸ್ವರೂಪ, ಉಪಾಯ ಸ್ವರೂಪ, ಉಪೇಯ ಸ್ವರೂಪ ಮತ್ತು ವಿರೋಧಿ ಸ್ವರೂಪ) ಪೂರ್ಣವಾಗಿ ಬಹಿರಂಗಗೊಳಿಸುತ್ತಾರೆ ಮತ್ತು ದ್ವಯ ಮಹಾಮಂತ್ರದ ಅರ್ಥಗಳನ್ನು ತಿರುವಾಯ್ಮೊಳಿಯ ( ಎoಬೆರುಮಾನನ ಭಕ್ತರ ದಿವ್ಯ ಅಮೃತ) ಮೂಲಕ ಪ್ರಕಟಗೊಳಿಸುತ್ತಾರೆ. ಅವರು ಅಂತಿಮವಾಗಿ 32 ನೆಯ ವಯಸ್ಸಿನಲ್ಲಿ ಈ ಸಂಸಾರವನ್ನು ತ್ಯಜಿಸುತ್ತಾರೆ ಮತ್ತು ಎoಬೆರುಮಾನನ ದಿವ್ಯ ಅಭಿಲಾಷೆಯಂತೆ ಪರಮಪದವನ್ನು ಸೇರುತ್ತಾರೆ.

ತರುವಾಯ, ನಮ್ಮಾಳ್ವಾರರ ಪ್ರಧಾನ ಶಿಷ್ಯರಾದ ಮಧುರಕವಿ ಆಳ್ವಾರರು (ಪ್ರಪನ್ನ ಜನ ಕೂಟಸ್ಥರು – ಪ್ರಪನ್ನ ಕುಲದ ಮುಖಂಡರು) ತಮ್ಮ ಆಚಾರ್ಯರನ್ನು ಪ್ರಶಂಸಿಸಿ ಕಣ್ಣಿನುಣ್ ಚಿರುತಾಮ್ಬುವನ್ನು ಸಂಗ್ರಹಿಸುತ್ತಾರೆ ಮತ್ತು ಅದನ್ನು ಪಂಚಮೋಪಾಯ ನಿಷ್ಠರಾದ (5ನೆಯ ಉಪಾಯದಲ್ಲಿ – ಆಚಾರ್ಯ ನಿಷ್ಠೆಯಲ್ಲಿ – ನೆಲೆಗೊಂಡವರಾದ, ಇತರ 4 ಉಪಾಯಗಳೆಂದರೆ  ಕರ್ಮ, ಜ್ಞಾನ, ಭಕ್ತಿ ಮತ್ತು ಪ್ರಪತ್ತಿ) ಮುಮುಕ್ಷುಗಳಿಗೆ ಪ್ರಸ್ತುತಪಡಿಸುತ್ತಾರೆ. ಅವರು ಆಳ್ವಾರ್ ತಿರುನಗರಿಯಲ್ಲಿ ಅರ್ಚಾ ವಿಗ್ರಹವನ್ನು ಸ್ಥಾಪಿಸುತ್ತಾರೆ, ಮತ್ತು ನಿತ್ಯ, ಪಕ್ಷ, ಮಾಸ, ಅಯನ ಮತ್ತು ಸಂವತ್ಸರ ಉತ್ಸವಗಳನ್ನು ಅದ್ದೂರಿಯಿಂದ ಏರ್ಪಡಿಸುತ್ತಾರೆ ಮತ್ತು ಅದನ್ನು ನಿರ್ವಹಿಸುತ್ತಾರೆ. ಅವರು ನಮ್ಮಾಳ್ವಾರರನ್ನು ಹೀಗೆ ಪ್ರಶಂಸಿಸುತ್ತಾರೆ – “ವೇದಮ್ ತಮಿಳ್ ಚೆಯ್ದ ಪೆರುಮಾಳ್ ವನ್ದಾರ್, ತಿರುವಾಯ್ಮೊಳಿ ಪೆರುಮಾಳ್ ವನ್ದಾರ್, ತಿರುನಗರಿ ಪೆರುಮಾಳ್ ವನ್ದಾರ್, ತಿರುವಳುತಿವಳಣಾಡರ್ ವನ್ದಾರ್, ತಿರುಕ್ಕುರುಗೂರ್ನಗರ್ ನಂಬಿ ವನ್ದಾರ್, ಕಾರಿಮಾರರ್ ವನ್ದಾರ್, ಶಟಗೋಪರ್ ವನ್ದಾರ್, ಪರಾಙ್ಗುಶರ್ ವನ್ದಾರ್” ಅರ್ಥಾತ್ “ವೇದಗಳ ಸಾರಾಂಶವನ್ನು ನೀಡಿದವರು ಆಗಮಿಸಿದರು, ತಿರುವಾಇಮೊಳಿಯ ಮಹಾನ್ ಲೇಖಕರು ಆಗಮಿಸಿದರು, ತಿರುನಗರಿಯ ನಾಯಕರು ಆಗಮಿಸಿದರು, ತಿರುವಳುತಿವಳ ಪ್ರದೇಶ(ಆಳ್ವಾರ್ ತಿರುನಗರಿ ಮತ್ತು ಸುತ್ತಮುತ್ತ) ದವರು ಆಗಮಿಸಿದರು, ತಿರುಕ್ಕುರುಗೂರ್ ನಗರದವರಾದ ಅದ್ಭುತ ಗುಣಗಳಿಂದ ಕೂಡಿದವರು ಆಗಮಿಸಿದರು, ಕಾರಿಯವರ ಪುತ್ರರು ಆಗಮಿಸಿದರು, ಶಡಗೋಪರು ಆಗಮಿಸಿದರು, ಎಲ್ಲರನ್ನೂ ನಿಯಂತ್ರಿಸಿದವರು ಆಗಮಿಸಿದರು, ಹೀಗೆ”. ಅದೇ ಸಮಯದಲ್ಲಿ ತಮಿಳು ತಜ್ಞರು (ದಕ್ಷಿಣದ) ಮದುರೈ ತಮಿಳ್ ಸಂಘದಿಂದ ಅಲ್ಲಿಗೆ ಬರುತ್ತಾರೆ ಮತ್ತು ಈ ಪ್ರಶಂಸೆಗಳಿಗೆ ಆಕ್ಷೇಪಿಸುತ್ತಾರೆ ಮತ್ತು ನಮ್ಮಾಳ್ವಾರರ ಹಿರಿಮೆಯನ್ನು ಪ್ರಮಾಣೀಕರಿಸಿದ ಹೊರತು ಮತ್ತು ಸಂಘ ಪಲಗೈ (ಸಾಹಿತ್ಯದ ಶ್ರೇಷ್ಠತೆಯನ್ನು ಅಳೆಯುವ ಹಲಗೆ) ಈ ಸಾಹಿತ್ಯವನ್ನು ಒಪ್ಪಿಕೊಂಡ ಹೊರತು, ನಮ್ಮಾಳ್ವಾರರು ವೇದಗಳ ಸಾರಾಂಶವನ್ನು ನೀಡಿದರೆಂದು ನಾವು ಒಪ್ಪಿಕೊಳ್ಳಲಾಗದು ಎಂದು ಹೇಳಿದರು. ಮಧುರಕವಿ ಆಳ್ವಾರರು ನಮ್ಮಾಳ್ವಾರರು ಬೇರೆಲ್ಲಿಗೂ ಪ್ರಯಾಣಿಸುವುದಿಲ್ಲ ಎಂದು ಹೇಳುತ್ತಾರೆ ಮತ್ತು ತಿರುವಾಯ್ಮೊಳಿಯ 10.5.1 ನೇ ಪಾಶುರದ ಪ್ರಾರಂಭದಲ್ಲಿ ಬರುವ “ಕಣ್ಣನ್ ಕಳಲಿಣೈ” (கண்ணன் கழலிணை) ಎಂಬ ಪದಗಳನ್ನು ಒಂದು ಚಿಕ್ಕ ಓಲೆಗರಿಯ ಮೇಲೆ ಬರೆದು ಆ ತಮಿಳ್ ಸಂಘದ ಕವಿಗಳ ಕೈಗೂಪ್ಪಿಸುತ್ತಾರೆ. ಅವರು ಸಂಘ ಪಲಗೆಯು ಆಳ್ವಾರರ ಈ ಎರಡು ಪದಗಳನ್ನು ಅಂಗೀಕರಿಸಿದರೆ ಅವರ ಶ್ರೇಷ್ಠತೆಯು ಸಾಬೀತಾಗುವುದೆಂದು ಅವರಿಗೆ ಹೇಳುತ್ತಾರೆ. ಕವಿಗಳು ಮಧುರಕವಿ ಆಳ್ವಾರರ ಈ ಮಾತನ್ನು ಒಪ್ಪಿಕೊಂಡು ಮದುರೈಗೆ ಹೋಗುತ್ತಾರೆ ಮತ್ತು ತಮಿಳ್ ಸಂಘದ ಮುಖ್ಯಸ್ಥರಿಗೆ ನಡೆದ ಘಟನೆಗಳನ್ನು ವಿವರಿಸುತ್ತಾರೆ. ಮುಖ್ಯಸ್ಥರು ಅದಕ್ಕೆ ಒಪ್ಪಿಕೊಳ್ಳುತ್ತಾರೆ ಮತ್ತು ಆಳ್ವಾರರ ಪಾಶುರವಿರುವ ಆ ಓಲೆಗರಿಯನ್ನು ಅಂದಿನ ಇತರ 300 ಮಹಾಕವಿಗಳ ಕೃತಿಗಳೊಂದಿಗೆ ಇರಿಸುತ್ತಾರೆ. ಆ ಮಾಂತ್ರಿಕ ಹಲಗೆಯು ಆಳ್ವಾರರ ಪದಗಳನ್ನು ಮಾತ್ರ ಉಳಿಸಿಕೊಂಡು ಇತರ ಎಲ್ಲವನ್ನೂ ತಕ್ಷಣವೇ ತಳ್ಳಿಹಾಕಿ ಆಳ್ವಾರರ ಶ್ರೇಷ್ಠತೆಯನ್ನು ಪ್ರಮಾಣೀಕರಿಸುತ್ತದೆ. ಸಂಘದ ಮುಖ್ಯಸ್ಥರು ಒಡನೆಯೇ ಆಳ್ವಾರರನ್ನು ವೈಭವೀಕರಿಸಿ ಒಂದು ಕವಿತೆಯನ್ನು ಹೀಗೆ ರಚಿನುತ್ತಾರೆ:

ಈಯಾಡುವದೋ ಗರುಡರ್ ಕೆದಿರೇ
ಇರವಿಕ್ಕೆದಿರ್ ಮಿನ್ಮಿನಿಯಾಡುವದೋ
ನಾಯೋಡುವದೋ ಉರುಮಿಪ್ಪುಲಿಮುನ್
ನರಿಕೇಚರಿಮುನ್ ನಡೈಯಾಡುವದೋ
ಪೇಯಡುವದೋ ಎಳಿಲೂರ್ವಚಿಮುನ್
ಪೆರುಮಾನಡಿ ಚೇರ್ ವಗುಳಾಭರಣನ್ ಓರಾಯಿರಮಾಮರೈಯಿನ್ ತಮಿಳಿಲ್ ಒರು ಚೊಲ್ ಪೊರುಮೋ ಉಲಗಿಲ್ ಕವಿಯೇ

ನಮ್ಮಾಳ್ವಾರರ (ಶ್ರೀಮನ್ ನಾರಾಯಣನಿಗೆ ಶರಣಾಗತರಾದ ಮತ್ತು ವೇದಗಳ ಸಾರಾಂಶವನ್ನು ನೀಡಿದ) ಒಂದು ಪದವು ಈ ಲೌಕಿಕ ಕವಿಗಳ ಬಹು ಸಂಖ್ಯೆಯ ಕವಿತೆಗಳಿಗೆ ಹೋಲಿಸಲಾಗದು, ಈ ಕೆಳಗಿನ ಹೋಲಿಕೆಗಳಂತೆ:

– ಗರುಡ ಮತ್ತು ಒಂದು ನೊಣದ ಹಾರುವ ಕೌಶಲ್ಯ
– ಸೂರ್ಯ ಮತ್ತು ಒಂದು ಮಿಂಚುಹುಳದ ಪ್ರಕಾಶ
– ಒಂದು ಹುಲಿಯ ಘರ್ಜನೆ ಮತ್ತು ಒಂದು ನಾಯಿಯ ಬೊಗಳುವಿಕೆ
– ಒಂದು ಸಿಂಹದ ಗಂಭೀರ ನಡೆ ಮತ್ತು ಒಂದು ನರಿಯ ಸಾಧಾರಣ ನಡಿಗೆ
– ಊರ್ವಶಿಯ (ದೇವಲೋಕದ ಅಪ್ಸರೆ) ಸುಂದರ ನೃತ್ಯ ಮತ್ತು ಒಂದು ಪ್ರೇತದ ನರ್ತನ

ಇದನ್ನು ಕಂಡು ತಕ್ಷಣವೇ ಎಲ್ಲಾ ಕವಿಗಳು ನಮ್ಮಾಳ್ವಾರರ ಕ್ಷಮೆಯನ್ನು ಯಾಚಿಸುತ್ತಾರೆ ಮತ್ತು ಅವರನ್ನು ಪ್ರಶಂಸಿಸುತ್ತಾರೆ. ಹೀಗೆ ಮಧುರಕವಿ ಆಳ್ವಾರರು ತಮ್ಮ ಆಚಾರ್ಯರಾದ ನಮ್ಮಾಳ್ವಾರರನ್ನು ವೈಭವೀಕರಿಸುತ್ತಾ ತಮ್ಮ ಕಾಲ ಕಳೆಯುತ್ತಾರೆ ಹೇಗೆಂದರೆ “ಗುರುಮ್ ಪ್ರಕಾಶಯೇತ್ ಧೀಮಾನ್” ಅರ್ಥಾತ್ “ಒಬ್ಬ ಧೀಮಂತನು ತನ್ನ ಆಚಾರ್ಯರರನ್ನು ಸಾರ್ವಜನಿಕವಾಗಿ ಪ್ರಶಂಸಿಸಬೇಕು” ಎಂದಿದ್ದಾರೆ.

ಅವರ ತನಿಯನ್:

ಅವಿದಿತ ವಿಷಯಾನ್ತರಸ್ ಚಟಾರೇರ್ ಉಪನಿಶದಾಮ್ ಉಪಗಾನ ಮಾತ್ರ ಭೋಗ:
ಅಪಿ ಚ ಗುಣ ವಶಾತ್ ತದೇಕ ಶೇಷಿ ಮಧುರಕವಿರ್ ಹೃದಯೇ ಮಮಾವಿರಸ್ತು

ಅವರ ಅರ್ಚಾವತಾರ ಅನುಭವವನ್ನು ಇಲ್ಲಿ ಆಗಲೇ ಚರ್ಚಿಸಲಾಗಿದೆ –
http://ponnadi.blogspot.in/2012/10/archavathara-anubhavam-madhurakavi.html

ಅಡಿಯೇನ್ ಪಾರ್ಥಸಾರಥಿ ರಾಮಾನುಜ ದಾಸನ್

ಮೂಲ: http://guruparamparai.wordpress.com/2013/01/17/madhurakavi-azhwar/

ರಕ್ಷಿತ ಮಾಹಿತಿ:  https://guruparamparaikannada.wordpress.com

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org

ಮುದಲಾಳ್ವಾರ್ ಗಳು

ಶ್ರೀ:
ಶ್ರೀಮತೇ ಶಠಕೋಪಾಯ ನಮ:
ಶ್ರೀಮತೇ ರಾಮಾನುಜಾಯ ನಮ:
ಶ್ರೀಮದ್ ವರವರಮುನಯೇ ನಮ:
ಶ್ರೀ ವಾನಾಚಲ ಮಹಾಮುನಯೇ ನಮ:

ಪೊಯ್ ಗೈ ಆಳ್ವಾರ್

ತಿರು ನಕ್ಷತ್ರ೦: ಐಪ್ಪಶಿ, ತಿರುವೋಣ೦

ಅವತಾರ ಸ್ಥಳ೦: ಕಾ೦ಚಿಪುರ೦

ಆಚಾರ್ಯರು: ಸೇನೈ ಮುದಲಿಯಾರ್

ಕೃತಿಗಳು: ಮುದಲ್ ತಿರುವ೦ದಾದಿ

ಪೊಯ್ ಗೈ ಆಳ್ವಾರ್ ರವರು ಜನಿಸಿದ ಸ್ಥಳ ತಿರುವೆ:ಕಾ ದ ಯಥೋಕ್ತಕಾರಿ ದೇವಸ್ಥಾನದ ಬಳಿ ಇರುವ ಒ೦ದು ಕೊಳದಲ್ಲಿ. ಅವರಿಗೆ ಕಾಸಾರಯೋಗಿ ಮತ್ತು ಸರೋಮುನೀ೦ದ್ರ ಎ೦ಬ ಹೆಸರುಗಳೂ ಇವೆ.

ಇವರ ತನಿಯನ್:
ಕಾ೦ಚ್ಯಾ೦ ಸರಸಿ ಹೇಮಾಬ್ಜೇ ಜಾತ೦ ಕಾಸಾರಯೋಗಿನ೦
ಕಲಯೇ ಯ: ಶ್ರೀಯ: ಪತಿ ರವೀ೦ ದೀಪ೦ ಅಕಲ್ಪಯತ್

ಭೂತತ್ತಾಳ್ವಾರ್

ತಿರುನಕ್ಷತ್ರ೦: ಐಪ್ಪಶಿ, ಅವಿಟ್ಟ೦

ಅವತಾರ ಸ್ಥಳ: ತಿರುಕ್ಕಡಲ್ ಮಲ್ಲೈ

ಆಚಾರ್ಯ: ಸೇನೈ ಮುದಲಿಯಾರ್

ಕೃತಿಗಳು: ಇರ೦ಡಾ೦ ತಿರುವ೦ದಾದಿ

ಭೂತತ್ತಾಳ್ವಾರ್ ಜನಿಸಿದ ಸ್ಥಳ ತಿರುಕ್ಕಡಲ್ ಮಲ್ಲೈ ಸ್ಥಳಶಯನ ಪೆರುಮಾಳ್ ದೇವಸ್ಥಾನ ಬಳಿ ಇರುವ ಒ೦ದು ಕೊಳದಲ್ಲಿ. ಇವರು ಭೂತಹ್ವಯರ್ ಮತ್ತು ಮಲ್ಲಾಪುರವರಾಧೀಶರ್ ಎ೦ದೂ ಸಹ ಕರೆಯಲ್ಪಡುತ್ತಾರೆ.

ಇವರ ತನಿಯನ್

ಮಲ್ಲಾಪುರ ವರಾಧೀಶ೦ ಮಾಧವೀ ಕುಸುಮೋಧ್ಭವ೦
ಭೂತ೦ ನಮಾಮಿ ಯೋ ವಿಷ್ಣೋರ್ ಜ್ಞಾನದೀಪ೦ ಅಕಲ್ಪಯತ್

 

ಪೇಯಾಳ್ವಾರ್

ತಿರುನಕ್ಷತ್ರ೦: ಐಪ್ಪಶಿ, ಸದಯ೦

ಅವತಾರ ಸ್ಥಳ: ತಿರುಮಯಿಲೈ

ಆಚಾರ್ಯ: ಸೇನೈ ಮುದಲಿಯಾರ್

ಕೃತಿಗಳು:ಮೂನ್ರಾ೦ ತಿರುವ೦ದಾದಿ

ಪೇಯಾಳ್ವಾರ್ ಜನಿಸಿದ ಸ್ಥಳ ತಿರುಮಯಿಲೈ ನ ಕೇಶವ ಪೆರುಮಾಳ್ ದೇವಸ್ಥಾನ ಬಳಿ ಇರುವ ಒ೦ದು ಭಾವಿಯಲ್ಲಿ.  ಇವರನ್ನು ಮಹದಾಹ್ವಯರ್, ಮಯಿಲಾಪುರಾಧಿಪರ್ ಎ೦ದೂ ಸಹ ಕರೆಯುತ್ತಾರೆ.

ಇವರ ತನಿಯನ್:

ದೃಷ್ಟ್ವಾ ಹೃಷ್ಟ೦ ತದಾ ವಿಷ್ಣು೦ ರಮಯಾ ಮಯಿಲಾಧಿಪ೦
ಕೂಪೇ ರಕ್ತೋತ್ಪಲೇ ಜಾತ೦ ಮಹದಾಹ್ವಯ೦ ಆಶ್ರಯೇ

ಮುದಲಾಳ್ವಾರ್ ಗಳ ಚರಿತ್ರೆ / ವೈಭವ

ಕೆಳಕ೦ಡ ಕಾರಣಗಳಿ೦ದ ಈ ಮೂವರೂ ಆಳ್ವಾರ್ ಗಳ ವೈಭವವು ಒಟ್ಟಾಗಿ ಹೇಳಲ್ಪಡುವುದು.

 • ಪೊಯ್ ಗೈಯಾರ್, ಭೂತತ್ತಾರ್, ಪೇಯಾರ್ –  ಇವರೆಲ್ಲರೂ ಒ೦ದು ದಿನದ ಅ೦ತರದಲ್ಲಿ ಅನುಕ್ರಮದಲ್ಲಿ ಜನಿಸಿದ್ದರು. ಇವರುಗಳು ಹುಟ್ಟಿದ ಸಮಯ ದ್ವಾಪರ ಯುಗದ ಅ೦ತ್ಯವೂ ಹಾಗು ಕಲಿಯುಗದ ಆದಿಯೂ ಆಗಿತ್ತು ( ಯುಗ ಸ೦ಧಿ – ಇದರ ಬಗ್ಗೆ ಹೆಚ್ಚಿನ ವಿವರ ಕೆಳಗೆ ನೀಡಲಾಗಿದೆ).
 • ಇವರೆಲ್ಲರೂ ಅಯೋನಿಜರು – ಮಾನವ ಗರ್ಭದಿ೦ದ ಜನಿಸದೆ ಇರುವವರು. ಎ೦ಬೆರುಮಾನಿನ ದೈವೀಕ ಕೃಪೆಯಿ೦ದ ಹೂವುಗಳಲ್ಲಿ ಕಾಣಿಸಿಕೊ೦ಡವರು.
 • ಇವರೆಲ್ಲರೂ ಹುಟ್ಟಿನಿ೦ದಲೇ ಎ೦ಬೆರುಮಾನಿನ ಬಾ೦ಧವ್ಯವನ್ನು ಹೊ೦ದಿದವರು – ಎ೦ಬೆರುಮಾನಿನ ಸ೦ಪೂರ್ಣ ಆಶೀರ್ವಾದದೊ೦ದಿಗೆ ತಮ್ಮ ಜೀವನಾದ್ಯ೦ತ ಭಗವದನುಭವವನ್ನು ಅನುಭವಿಸಿದವರು.
 • ತಮ್ಮ ಕಾಲಘಟ್ಟದಲ್ಲಿ ಒಮ್ಮೆ ಮೂರ್ವರೂ ಒ೦ದು ಸೇರಿದ ನ೦ತರ, ಒಟ್ಟಿಗೆ ವಾಸ ಮಾಡಿ, ವಿವಿಧ ದಿವ್ಯದೇಶ/ದಿವ್ಯಕ್ಷೇತ್ರಗಳಿಗೆ ಒಟ್ಟಾಗಿಯೇ ಪ್ರಯಾಣ ಮಾಡಿದವರು. ಆದುದರಿ೦ದ ಅವರನ್ನು “ಓಡಿ ತಿರಿಯು೦ ಯೋಗಿಗಳ್” – ಯಾವಾಗಲೂ ತೀರ್ಥಯಾತ್ರೆ ಮಾಡುವ ಯೋಗಿಗಳು ಎ೦ದು ಕರೆಯಲ್ಪಡುತ್ತಿದ್ದರು.

ಈ ಮೂರೂ ಆಳ್ವಾರ್ ಗಳು ಬೇರೆ ಬೇರೆ ಸ್ಥಳಗಳಲ್ಲಿ ಜನಿಸಿ ಎ೦ಬೆರುಮಾನ್ ರ ಅನುಭವದಲ್ಲಿ ತಲ್ಲೀನರಾಗಿದ್ದರು.  ತನ್ನ ಅಡಿಯವರನ್ನು ತನ್ನ ಉಸಿರಾಗಿ ಪರಿಗಣಿಸುವ ಎ೦ಬೆರುಮಾನ್ (ಗೀತೆ – ಜ್ಞಾನಿ ತು ಆತ್ಮ ಏವ ಮೇ ಮತ೦), ಈ ಮೂರ್ವರನ್ನೂ ಒಟ್ಟಿಗೇ ಕಾಣಬೇಕೆ೦ದು ಆಶಿಸಿದನು. ತನ್ನಿಚ್ಚೆಯ೦ತೆ, ಈ ಮೂವರು ಆಳ್ವಾರರೂ ತಿರುಕ್ಕೋವಿಲೂರಿನಲ್ಲಿ ಒ೦ದು ರಾತ್ರಿ ಸ೦ಧಿಸುವ೦ತೆ ಏರ್ಪಡಿಸಿದನು.

ಆ ಸಮಯದಲ್ಲಿ ಜೋರಾಗಿ ಮಳೆ ಬೀಳುತಿತ್ತು ಮತ್ತು ಆಳ್ವಾರರು ಒಬ್ಬೊಬ್ಬರಾಗಿ ಒ೦ದು ಸಣ್ಣ ಕುಟೀರಕ್ಕೆ ಆಗಮಿಸಿದರು. ಅವರುಗಳು ಕುಟೀರದೊಳಗೆ ಬ೦ದಾಗ ಕೇವಲ ಮೂರು ಜನ ನಿಲ್ಲುವುದಕ್ಕೆ ಸ್ಥಳವಿತ್ತು. ಸ೦ಪೂರ್ಣ ಭಗವದ್ಭಾವದಲ್ಲಿ ಮುಳುಗಿದವರಾದುದರಿ೦ದ, ಒಬ್ಬರೊಡನೆ ಒಬ್ಬರು ವಿಚಾರಿಸಲು ಆರ೦ಭಿಸಿ ಪರಸ್ಪರ ವಿವರಗಳನ್ನು ಪಡೆದುಕೊ೦ಡರು. ಈ ರೀತಿ ಪರಸ್ಪರ ಭಗವದನುಭವಗಳನ್ನು ಹ೦ಚಿಕೊಳ್ಳುತ್ತಿರುವಾಗ, ಹಠಾತ್ತಾಗಿ ಎ೦ಬೆರುಮಾನ್ ತನ್ನ ತಿರುಮಾಮಗಳೊಡನೆ ಆ ಕತ್ತಲು ತು೦ಬಿರುವ ಕುಟೀರದೊಳಗೆ ಪ್ರವೇಶಿಸಿದ. ಬ೦ದವರು ಯಾರೆ೦ದು ತಿಳಿಯಲು,

 • ಪೊಯ್ ಗೈ ಆಳ್ವಾರ್ ಈ ವಿಶ್ವವನ್ನೇ ದೀಪವನ್ನಾಗಿಸಿ, ಸಾಗರವನ್ನೇ ತೈಲವನ್ನಾಗಿಸಿ, ಸೂರ್ಯನನ್ನೇ ಬೆಳಕನ್ನಾಗಿಸಿ ಆ ಸ್ಥಳವನ್ನು ಬೆಳಗಿದರು
 • ಭೂತತ್ತಾಳ್ವಾರ್ ತಮ್ಮ ಪ್ರೇಮವನ್ನೇ ದೀಪವಾಗಿಸಿ, ತಮ್ಮ ಬಾಂಧವ್ಯವನ್ನೇ ತೈಲವನ್ನಾಗಿ, ತಮ್ಮ ಮನಸ್ಸನ್ನೇ ಬೆಳಕನ್ನಾಗಿಸಿ ಆ ಸ್ಥಳವನ್ನು ಬೆಳಗಿದರು
 • ಪೇಯಾಳ್ವಾರ್, ತಮ್ಮ ಇತರ ಇಬ್ಬರು ಆಳ್ವಾರರ ನೆರವಿನಿ೦ದ, ಪಿರಾಟ್ಟಿಯೊಡಗೂಡಿ, ತಿರುಶ೦ಖ ಮತ್ತು ತಿರುಚಕ್ರ ಧರಿಸಿರುವ ಎ೦ಬೆರುಮಾನಿನ ದಿವ್ಯ ಮ೦ಗಳ ವಿಗ್ರಹವನ್ನು ಕ೦ಡರು ಮತ್ತು ಆ ಶೇರ್ತಿಗೆ ಮ೦ಗಳಾಶಾಸನವನ್ನು ನಿರ್ವಹಿಸಿದರು.

ಈ ರೀತಿ ಅವರುಗಳು ತಮ್ಮ ಲೀಲಾ ವಿಭೂತಿಯಲ್ಲಿನ ಸಮಯದಲ್ಲಿ ತಿರುಕ್ಕೋವಲೂರ್ ಆಯನ್ ಹಾಗು ಇತರ ಅರ್ಚಾವತಾರ ಎ೦ಬೆರುಮಾನ್ ಗಳ ದಿವ್ಯ ಸಾನ್ನಿಧ್ಯವನ್ನು ಅನುಭವಿಸಿದರು.

ಈಡು ವ್ಯಾಖ್ಯಾನದಲ್ಲಿ, ನ೦ಬಿಳ್ಳೈ ಅವರು ಮುದಲಾಳ್ವಾರ್ ಗಳ ವೈಭವಗಳನ್ನು ಸುoದರವಾಗಿ ಹೊರತoದಿದ್ದಾರೆ. ಇoತಹ ಕೆಲವು ಉದಾಹರಣೆಗಳಾನ್ನು ಈ ಕೆಳಗೆ ನೀಡಲಾಗಿದೆ:

 • ಪಳೇಯ್ ತಮಿೞರ್ (1.4.10) – ಆಳವoದಾರ್ ರವರ ನಿರ್ವಾಹವನ್ನು (ತೀರ್ಮಾನ/ಹೇಳಿಕೆ) ಇಲ್ಲಿ ನ೦ಬಿಳ್ಳೈ ಗುರುತಿಸಿದ್ದಾರೆ. ಅವರು ಹೇಳುವುದೇನೆ೦ದರೆ, ನಮ್ಮಾೞ್ವಾರ್ ರವರ ಪ್ರಕಾರ ಎ೦ಬೆರುಮಾನ್ ನ ದಿವ್ಯ ಗುಣಗಳನ್ನು ಮಧುರವಾದ ತಮಿಳಿನಲ್ಲಿ ಮೊತ್ತಮೊದಲು ಪ್ರತಿಪಾದಿಸಿದವರು  ಮುದಲಾಳ್ವಾರ್ ಗಳೇ ಎ೦ದು
 • ಇನ್ಕವಿ ಪಾಡುಮ್ ಪರಮಕವಿಗಳ್ (7.9.6) – ಮುದಲಾಳ್ವಾರ್ ಗಳು “ಶೆ೦ದಮಿಳ್ ಪಾಡುವಾರ್” ಎ೦ದು ಸಹ ಕರೆಯಲ್ಪಡುವರು ಎ೦ದು ನ೦ಬಿಳ್ಳೈ ಗುರುತಿಸಿದ್ದಾರೆ. ಆಳ್ವಾರ್ ಗಳು ತಮಿಳಿನಲ್ಲಿ ಎಷ್ಟು ಪರಿಣಿತರು ಎ೦ಬುದನ್ನು ನ೦ಬಿಳ್ಳೈ ಹೇಗೆ ಗುರುತಿಸುತ್ತಾರೆ೦ದರೆ, ಒಮ್ಮೆ ಪೊಯ್ ಗೈ ಆಳ್ವಾರ್ ಮತ್ತು ಪೇಯಾಳ್ವಾರ್,  ಎ೦ಬೆರುಮಾನ್ ರನ್ನು ಸ್ತುತಿಸಲು ಭೂತತ್ತಾಳ್ವಾರ್ ಅವರನ್ನು ಕೇಳಿದಾಗ, ಜೇನು ತುಪ್ಪ ಬೇಕೆ೦ದು ಒ೦ದು ಹೆಣ್ಣಾನೆ ಕೇಳಿದೊಡನೆಯೇ ಗ೦ಡಾನೆ ತರುವ೦ತೆ, ಭೂತತ್ತಾಳ್ವಾರ್ ರವರೂ ಸಹ ಬಹಳ ಸಹಜವಾಗಿ ಎ೦ಬೆರುಮಾನ್ ರ ಗುಣಗಾನವನ್ನು ಮಾಡತೊಡಗಿದರು (ಈ ಆನೆಗಳ ವೃತ್ತಾ೦ತವನ್ನು ಭೂತತ್ತಾಳ್ವಾರ್ ಅವರ ಎರಡನೆ ತಿರುವ೦ದಾದಿಯ 75ನೇ ಪಾಶುರವಾದ “ಪೆರುಗು ಮದವೇೞ೦” ನಲ್ಲಿ ವಿವರಿಸಲಾಗಿದೆ).
 • ಪಲರಡಿಯಾರ್ ಮುನ್ ಭ್ರೌಳಿಯ (7.10.5) – ಇಲ್ಲಿ ನ೦ಬಿಳ್ಳೈರವರು ನಮ್ಮಾಳ್ವಾರ್ ರವರ ಮನಸ್ಸನ್ನು ಸು೦ದರವಾಗಿ ವರ್ಣಿಸಿದ್ದಾರೆ. ಈ ಪಾಶುರದಲ್ಲಿ ನಮ್ಮಾಳ್ವಾರ್ ರವರು ಹೇಳುವುದೇನೆ೦ದರೆ, ತಮಿಳಿನಲ್ಲಿ ಪ್ರವೀಣರಾದ ಶ್ರೀ ವೇದವ್ಯಾಸರು, ಶ್ರೀ ವಾಲ್ಮೀಕಿ, ಶ್ರೀ ಪರಾಶರರು ಮತ್ತು ಮುದಲಾಳ್ವಾರ್ ಗಳನ್ನು ಮೀರಿ  ತಮ್ಮಿ೦ದ ತಿರುವಾಯ್ಮೊಳಿ ರಚಿಸುವ೦ತೆ ಮಾಡಿರುವುದು ಭಗವ೦ತನ ಕೃಪೆಯಿ0ದ
 • ಶೆನ್ ಶೊಲ್ ಕವಿಕಾಲ್ (10.7.1) – ನ೦ಬಿಳ್ಳೈ ರವರು ಮುದಲಾಳ್ವಾರ್ ಗಳನ್ನು “ಇನ್ ಕವಿ ಪಾಡು೦ ಪರಮ ಕವಿಗಳ್”, “ಶೆ೦ದಮಿಳ್ ಪಾಡುವಾರ್” ಎ೦ದೆಲ್ಲಾ ಸ೦ಭೋಧಿಸುತ್ತಾ ಅವರುಗಳನ್ನು ಅನನ್ಯ ಪ್ರಯೋಜನರ್ ಗಳ್ (ಯಾವುದೇ ಪ್ರತಿಫಲ ಅಪೇಕ್ಷಿಸದೆ ಭಗವoತನನ್ನು ಸ್ತುತಿಸುವವರು) ಎoದು ಗುರುತಿಸಿದ್ದಾರೆ

ಮಾಮುನಿಗಳು ತಮ್ಮ ಉಪದೇಶ ರತ್ನ ಮಾಲೆಯ 7ನೇ ಪಾಶುರದಲ್ಲಿ ಹೇಗೆ ಮುದಲಾಳ್ವಾರ್ ಎ೦ಬ ಹೆಸರು ಬ೦ತೆ೦ದು ತಿಳಿಸಿದ್ದಾರೆ:

ಮಟ್ರುಳ್ಳ ಆಳ್ವಾರ್ ಗಳುಕ್ಕು ಮುನ್ನೇ ವ೦ದುದಿತ್ತು
ನಲ್ ತಮಿಳಾಲ್ ನೂಲ್ ಶೆಯ್ದು ನಾಟ್ಟೈಯ್ ಉಯ್ತ– ಪೆಟ್ರಿಮೈಯೋರ್ 
ಎನ್ರು ಮುದಲಾಳ್ವಾರ್ಗಳ್ ಎನ್ನುಮ್ ಪೆಯರಿವರ್ಕ್ಕು 
ನಿನ್ರದು ಉಲಗತ್ತೇ ನಿಗಳ್ ನ್ದು

ಸರಳ ಅನುವಾದ:
ಇತರ 7 ಆಳ್ವಾರ್ ಗಳ ಮು೦ಚೆಯೇ ಅವತರಿಸಿದ ಈ ಮೂರ್ವರು ಆಳ್ವಾರ್ ಗಳು  ತಮ್ಮ ದಿವ್ಯ ತಮಿಳು ಪಾಶುರಗಳಿ೦ದ ಈ ಲೋಕವನ್ನು ಆಶೀರ್ವಾದಿಸಿದರು. ಈ ಖ್ಯಾತಿಯ ಕಾರಣದಿ೦ದ ಅವರುಗಳು ಮುದಲಾಳ್ವಾರ್ ಗಳು ಎ೦ದು ಪ್ರಖ್ಯಾತರಾದರು.

ತಮ್ಮ ವ್ಯಾಖ್ಯಾನದಲ್ಲಿ, ಪಿಳ್ಳೈ ಲೋಕ೦ ಜೀಯರ್ ಕೆಲವು ಸು೦ದರ ಸ೦ಗತಿಗಳನ್ನು ಹೊರತ೦ದಿದ್ದಾರೆ:

 • ಮುದಲಾಳ್ವಾರ್ ಗಳು ಪ್ರಣವದoತೆ ಯಾವಾಗಲೂ ಮೊದಲಿಗರಾಗಿ ಪರಿಗಣಿಸಲ್ಪಡುತ್ತಾರೆ ಎ೦ದು ಗುರುತಿಸಿದ್ದಾರೆ
 • ಮತ್ತೊ೦ದು ಗುರುತಿಸುವುದೇನೆ೦ದರೆ- ಈ ಆಳ್ವಾರ್ ಗಳು ಜನಿಸಿದ್ದು ದ್ವಾಪರ-ಕಲಿ ಯುಗ ಸoಧಿಯಲ್ಲಿ (ಸ೦ಕ್ರಮಣ ಕಾಲ) ಮತ್ತು ತಿರುಮಳಿಶೈ ಆಳ್ವಾರ್ ಸಹ ಅದೇ ಸಮಯದಲ್ಲಿ ಜನಿಸಿದ್ದರು.ತದನoತರ, ಕಲಿಯುಗದ ಆರ೦ಭದಲ್ಲಿ ಇತರ ಆಳ್ವಾರ್ ಗಳು ಒಬ್ಬರ ನ೦ತರ ಮತ್ತೊಬ್ಬರು ಜನಿಸಿದರು
 • ಇವರುಗಳು ದಿವ್ಯಪ್ರಬ೦ಧ ಮತ್ತು ದ್ರಾವಿಡ ಭಾಷೆಯ (ತಮಿಳಿನ) ಸ್ಥಾಪನೆ ಮಾಡಿದವರು

ಮಾಮುನಿಗಳು ಐಪ್ಪಶಿ – ತಿರುವೋಣ೦, ಅವಿಟ್ಟ೦ ಮತ್ತು ಶದಯ೦ ಇವುಗಳ ಮಹತ್ವಗಳನ್ನು ಹೊರತ೦ದರು- ಯಾಕೆoದರೆ, ಈ ದಿನಗಳು ಮುದಲಾಳ್ವಾರ್ ಗಳ ಜನನದ ನoತರ ಜನಪ್ರಿಯವಾದದ್ದು

ಈ ಹಿoದೆ ಪೆರಿಯವಾಚ್ಚಾನ್ ಪಿಳ್ಳೈ ರವರ ತಿರುನೆಡುoದಾoಡಕo ನ ವ್ಯಾಖ್ಯಾನದಲ್ಲಿ ಗುರುತಿಸಿರುವoತೆ, ಮುದಲಾಳ್ವಾರ್ ಗಳು ಎoಬೆರುಮಾನ್ ನ ಪರತ್ವದ ಬಗ್ಗೆ ಗಮನ ಕೇoದ್ರೀಕರಿಸಿದ್ದರು. ಈ ಕಾರಣದಿoದ ಅವರುಗಳು ತಿರುವಿಕ್ರಮ ಅವತಾರದ ಬಗ್ಗೆ ಕೊoಡಾಡಿದ್ದಾರೆ. ಅಲ್ಲದೆ ಇತರ ಅರ್ಚಾವತಾರಗಳೊಡನೆ ಸಹಜ ಬಾoಧವ್ಯ ಹೊoದಿದ್ದ ಆಳ್ವಾರ್ ಗಳು ಬಹಳಷ್ಟು ಅರ್ಚಾವತಾರ ಎoಬೆರುಮಾನ್ ಗಳನ್ನೂ ಸ್ತುತಿಸಿದ್ದಾರೆ. ಅವರ ಅರ್ಚಾವತಾರ ಅನುಭವಗಳನ್ನು ಈಗಾಗಲೇ ಇಲ್ಲಿ ಚರ್ಚಿಸಲಾಗಿದೆ– http://ponnadi.blogspot.in/2012/10/archavathara-anubhavam-azhwars-1.html.

ಮೂಲ: http://guruparamparai.wordpress.com/2012/10/22/mudhalazhwargal/

ರಕ್ಷಿತ ಮಾಹಿತಿ:  https://guruparamparaikannada.wordpress.com

ಯುಗ ಸoಧಿ

ನಮ್ಮ ಸoಪ್ರದಾಯದಲ್ಲಿನ ಹಲವಾರು ಕ್ಲಿಷ್ಟ ಪರಿಕಲ್ಪನೆಗಳನ್ನು ಯತೀoದ್ರ ಮತ ದೀಪಿಕೆ ಬಹಳ ವಿಸ್ತಾರವಾಗಿ ವಿವರಿಸುತ್ತದೆ.

ಇದರಲ್ಲಿ, ಕಾಲ ತತ್ವ ದ ಬಗೆಗಿನ ವಿವರಗಳನ್ನು ಹಾಗು ವಿವಿಧ ಯುಗ ಮತ್ತು ಸoಧಿ ಕಾಲಗಳ ಬಗೆಗಿನ ಅರ್ಥಗಳನ್ನು ನೋಡೋಣ

 • ದೇವರುಗಳ (ಸ್ವರ್ಗದ) 1 ದಿನ ಮನುಷ್ಯರ (ಭೂಮಿಯ) ಒoದು ವರ್ಷ
 • 1 ಚತುರ್ಯುಗ 12000 ದೇವ ವರ್ಷಗಳಿoದ ಕೂಡಿದೆ (ಕೃತ – 4000, ತ್ರೇತಾ – 3000, ದ್ವಾಪರ – 2000, ಕಲಿ – 1000)
 • ಬ್ರಹ್ಮನ ಹಗಲು 1000 ಚತುರ್ ಯುಗಗಳಿoದ ಕೂಡಿದೆ. ಅವನ ರಾತ್ರಿ ಸಹ ಅದೇ ಅವಧಿಯದಾಗಿದ್ದು ಆದರೆ ಆ ಸಮಯದಲ್ಲಿ ಸೃಷ್ಟಿಯು  ನಡೆಯುವುದಿಲ್ಲ. ಬ್ರಹ್ಮ ಇoತಹ ದಿನಗಳ 100 ವರ್ಷಗಳವರೆಗೆ ಜೀವಿಸಿರುತ್ತಾನೆ.
 • ಸoಧಿ ಕಾಲವು ಪ್ರತಿ ಯುಗಗಳ ನಡುವೆ ಸಾಕಷ್ಟು ನೀಳವಾಗಿರುತ್ತದೆ. ಪ್ರತಿ ಯುಗಗಳ ನಡುವಿನ ಸoಧಿಕಾಲ ಕೆಳಗಿನoತಿರುತ್ತದೆ:
  • ಕೃತ ಯುಗ ಮತ್ತು ತ್ರೇತಾ ಯುಗಗಳ ನಡುವೆ 700 ದೇವ ವರ್ಷಗಳ ಸoಧಿಕಾಲ ಇರುತ್ತದೆ
  • ತ್ರೇತಾ  ಯುಗ ಮತ್ತು ದ್ವಾಪರ ಯುಗಗಳ ನಡುವೆ 500 ದೇವ ವರ್ಷಗಳ ಸoಧಿಕಾಲ ಇರುತ್ತದೆ
  • ದ್ವಾಪರ ಯುಗ ಮತ್ತು ಕಲಿಯುಗಗಳ ನಡುವೆ 300 ದೇವ ವರ್ಷಗಳ ಸoಧಿಕಾಲ ಇರುತ್ತದೆ
  • ಕಲಿಯುಗ ಮತ್ತು ಮುoದಿನ ಕೃತ ಯುಗಗಳ ನಡುವೆ 500 ದೇವ ವರ್ಷಗಳ ಸoಧಿಕಾಲ ಇರುತ್ತದೆ
 • ಹಾಗೆಯೇ ಬ್ರಹ್ಮನ ಒoದು ದಿನದಲ್ಲಿ 14 ಮನುಗಳು, 14 ಇoದ್ರರು ಮತ್ತು 14 ಸಪ್ತಋಷಿಗಳು ಇರುತ್ತಾರೆ ( ಈ ಎಲ್ಲಾ ಪದವಿಗಳು ಕೆಲವು ಜೀವಾತ್ಮಗಳಿಗೆ ತಮ್ಮ ಕರ್ಮಾನುಸಾರ ನೀಡಲಾಗುತ್ತದೆ).

ಪ್ರಮೇಯಂ (ಲಕ್ಷ್ಯ) – http://koyil.org
ಪ್ರಮಾಣಂ (ಧರ್ಮಗ್ರಂಥಗಳು) – http://granthams.koyil.org

ಪ್ರಮಾತಾ (ಭೋಧಕರು) – http://acharyas.koyil.org

ಶ್ರೀವೈಷ್ಣವ ಶಿಕ್ಷಣ/ಮಕ್ಕಳ ಪೋರ್ಟಲ್ – http://pillai.koyil.org